ತನ್ನ ಮೇಲೆ ಏಕಕಾಲಕ್ಕೆ ಆರು ಉಗ್ರರು ದಾಳಿ ಮಾಡಿದ ವೇಳೆ, ಧೃತಿಗೆಡದ ದಿಟ್ಟ ಹುಡುಗಿಯೊಬ್ಬಾಕೆ, ಉಗ್ರನೊಬ್ಬನ ಎಕೆ-47 ಕಸಿದು, ಈ ಮೂಲಕ ಉಗ್ರರನ್ನು ಸಮರ್ಥವಾಗಿ ಎದುರಿಸಿದಳಲ್ಲದೆ, ಒಬ್ಬ ಉಗ್ರನನ್ನು ಗುಂಡಿಕ್ಕಿ ಕೊಂದಿರುವ ಅಪರೂಪದ ಘಟನೆ ರಾಜೌರಿ ಜಿಲ್ಲೆಯಲ್ಲಿ ಸಂಭವಿಸಿದೆ.
ತಿರುಗಿಬಿದ್ದ ರುಕ್ಸಾನಳ ರೌದ್ರಾವತಾರದ ವೇಳೆ ಉಗ್ರನೊಬ್ಬ ತನ್ನ ಪ್ರಾಣ ತೆತ್ತರೆ, ಮತ್ತೊಬ್ಬ ಗಾಯಗೊಂಡ. ಉಳಿದವರು ತಮ್ಮ ಜೀವ ಉಳಿಸಿಕೊಳ್ಳಲು ಪರಾರಿಯಾಗಿದ್ದಾರೆ. ರುಕ್ಸಾನ ಗ್ರಾಮದ ರಕ್ಷಣಾ ಸಮಿತಿಯಲ್ಲಿ ತರಬೇತಿ ಹೊಂದಿದ್ದು, ರೈಫಲ್ ಬಳಕೆಯ ವಿಧಾನವನ್ನು ತಿಳಿದುಕೊಂಡಿರುವುದು ಆಕೆಗೆ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಹಾಯ ಮಾಡಿತು.
"ನಾನು ಉಗ್ರನನ್ನು ಗೋಡೆಗೆ ತಳ್ಳಿದೆ. ಆತನಿಗೆ ರೈಫಲ್‌ನ ಹಿಂದಿನಿಂದ ಬಡಿದೆ ಅಲ್ಲದೆ ಹಲವು ಸುತ್ತುಗಳ ಗುಂಡು ಹಾರಿಸಿದೆ" ಎಂಬುದಾಗಿ ಧೀರೆ ರುಕ್ಸಾನ ಹೇಳಿದ್ದಾರೆ.
ಭಾನುವಾರ ಸಾಯಂಕಾಲ ಆರು ಶಂಕಿತ ಲಷ್ಕರೆ ಉಗ್ರರು ಇವರ ಮನೆಗೆ ನುಸುಳಿ, ರುಕ್ಸಾನಳನ್ನು ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ರುಕ್ಸಾನಳ ಹೆತ್ತವರು ಒಪ್ಪದಿದ್ದಾಗ ಅವರನ್ನು ಥಳಿಸಲಾಯಿತು. ಅಷ್ಟರಲ್ಲಿ ರುಕ್ಸಾನಳ ಸಹೋದರ ಉಗ್ರರ ಮೇಲೆ ಮಚ್ಚಿನಿಂದ ದಾಳಿ ಮಾಡಿದ. ಇಷ್ಟರಲ್ಲಿ ರುಕ್ಸಾನ ಉಗ್ರನೊಬ್ಬನಿಂದ ರೈಫಲ್ ಕಸಿದು ರುದ್ರಾವತಾರ ತಾಳಿದಳು. ಈ ಎಲ್ಲ ಘಟನೆಗಳು ಮುಗಿದ ನಂತರ ಪೊಲೀಸರಿಗೆ ಸುದ್ದಿ ತಿಳಿಯಿತು.
"ಇವರು ಆಯುಧಗಳನ್ನು ನಮಗೆ ಒಪ್ಪಿಸಿದ್ದು, ಗುಂಡಿನ ಚಕಮಕಿ ಕುರಿತು ಮಾಹಿತಿ ನೀಡಿದರು" ಎಂಬುದಾಗಿ ಪೊಲೀಸ್ ವರಿಷ್ಠಾಧಿಕಾರಿ ಶಬ್ಬೀರ್ ಚೌಧರಿ ಹೇಳಿದ್ದಾರೆ. ಉಗ್ರರು ತಮ್ಮ ಮೇಲೆ ಪ್ರತೀಕಾರದ ದಾಳಿ ನಡೆಸಬಹುದು ಎಂಬ ಭೀತಿಯಲ್ಲಿರುವ ರುಕ್ಸಾನರ ಕುಟುಂಬ, ಸ್ಥಳೀಯ ಪೊಲೀಸರು ಹಾಗೂ ಸೇನೆಯ ರಕ್ಷಣೆ ಕೋರಿದ್ದಾರೆ.