ಸಾರ್ವಜನಿಕ ಜಾಗದಲ್ಲಿ ಪೂಜಾಸ್ಥಳ ನಿರ್ಮಾಣಕ್ಕೆ ಸು.ಕೋ ನಿಷೇಧ
ನವದೆಹಲಿ, ಮಂಗಳವಾರ, 29 ಸೆಪ್ಟೆಂಬರ್ 2009( 16:02 IST )
ರಾಷ್ಟ್ರಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಹೊಸ ಪೂಜಾಸ್ಥಳಗಳನ್ನು ನಿರ್ಮಿಸದಂತೆ ಸುಪ್ರೀಂಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಈ ನಿರ್ಬಂಧವು ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು, ಗುರುದ್ವಾರಗಳು ಮತ್ತು ಇತರ ಎಲ್ಲಾ ಸಮುದಾಯಗಳ ಪೂಜಾ ಸ್ಥಳಗಳಿಗೆ ಅನ್ವಯಿಸುತ್ತದೆ ಎಂಬುದಾಗಿ ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಹಾಗೂ ಮುಕುಂದಾಕಮ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ತನ್ನ ಮಧ್ಯಂತರ ಆಜ್ಞೆಯೊಂದರಲ್ಲಿ ಹೇಳಿದೆ.
ನ್ಯಾಯಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಪೂಜಾಸ್ಥಳಗಳನ್ನು ನಿರ್ಮಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ತನಕ ಈ ಆದೇಶವು ಜಾರಿಯಲ್ಲಿರುತ್ತದೆ ಎಂಬುದಾಗಿ ನ್ಯಾಯಪೀಠ ಹೇಳಿದೆ. ಅಲ್ಲದೆ, ಪ್ರಸಕ್ತ ಅಸ್ತಿತ್ವದಲ್ಲಿರುವ ಪೂಜಾಸ್ಥಳಗಳ ಕುರಿತು ಆಯಾ ರಾಜ್ಯ ಸರ್ಕಾರಗಳು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಬೇಕು ಎಂಬುದಾಗಿ ಹೇಳಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಹೊಸ ಪೂಜಾಸ್ಥಳಗಳ ನಿರ್ಮಾಣ ಇಲ್ಲ ಎಂಬುದಾಗಿ ರಾಜ್ಯಗಳು ಹಾಗೂ ಕೇಂದ್ರವು ಒಮ್ಮತಕ್ಕೆ ಬಂದಿರುವುದಾಗಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಮ್ ಮಾಹಿತಿ ನೀಡಿದ ಬಳಿಕ ನ್ಯಾಯಪೀಠ ಈ ನಿರ್ದೇಶನ ಪಾಸು ಮಾಡಿದೆ.
ಸಾರ್ವಜನಿಕ ಸ್ಥಳವನ್ನು ಒತ್ತುವರಿ ಮಾಡುವ ಮೂಲಕ ಯಾವುದೇ ಪೂಜಾಸ್ಥಳಗಳ ನಿರ್ಮಾಣವಾಗುತ್ತಿಲ್ಲ ಎಂಬುದನ್ನು ಸರ್ಕಾರ ಖಚಿತಪಡಿಸಬೇಕು ಎಂಬುದಾಗಿ ಜುಲೈ 31ರಂದು ಅಪೆಕ್ಸ್ ಕೋರ್ಟ್ ನಿರ್ದೇಶನ ನೀಡಿತ್ತು.
ಪೂಜಾ ಸ್ಥಳಗಳು ಸೇರಿದಂತೆ ಸಾರ್ವಜನಿಕ ರಸ್ತೆಗಳಲ್ಲಿ ನಿರ್ಮಿಸಿರುವ ಎಲ್ಲಾ ಅನಧಿಕೃತ ನಿರ್ಮಾಣಗಳನ್ನು ಧ್ವಂಸಗೊಳಿಸಲು ನಗರಪಾಲಿಕೆಗಳಿಗೆ ಗುಜರಾತ್ ಹೈಕೋರ್ಟ್ 2006ರಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿತ್ತು.