ಖಗಾರಿಯ(ಬಿಹಾರ), ಮಂಗಳವಾರ, 29 ಸೆಪ್ಟೆಂಬರ್ 2009( 16:59 IST )
ದುರ್ಗಾ ಪೂಜಾ ಸಂಭ್ರಮಕ್ಕೆ ತೆರಳಿದ ವೇಳೆ ದೋಣಿಗಳೆರಡು ಮುಳುಗಿ ಕನಿಷ್ಠ 26 ಮಂದಿ ಸಾವನ್ನಪ್ಪಿದ್ದರೆ, ಇತರ 50 ಮಂದಿ ಕಾಣೆಯಾಗಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಿದೆ. ಬಾಗ್ಮತಿ ಹಾಗೂ ಕಮಲಾ ಬಾಲನ್ ನದಿಗಳಲ್ಲಿ ದುರಂತ ಸಂಭವಿಸಿದೆ ಎಂಬುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಮಾರು 100ಕ್ಕೂ ಅಧಿಕ ಮಂದಿಯನ್ನು ಕರೆದೊಯ್ಯತ್ತಿದ್ದ ನಾಡದೋಣಿಯೊಂದು ಕಳೆದ ಸಾಯಂಕಾಲ ಖಗಾರಿಯಾದ ಫ್ಲುಟೋರಾ ಘಾಟ್ ಎಂಬಲ್ಲಿ ಬಾಗ್ಮತಿ ನದಿಯಲ್ಲಿ ಮುಳುಗಿದ್ದು, 18 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಇತರ ಸುಮಾರು 50 ಮಂದಿ ಕಾಣೆಯಾಗಿದ್ದಾರೆ ಎಂಬುದಾಗಿ ಎಸ್ಪಿ ಇಂದ್ರಾನಂದ ಮಿಶ್ರಾ ತಿಳಿಸಿದ್ದಾರೆ. ಪ್ರಯಾಣಿಕರು ವಿಜಯ ದಶಮಿ ಉತ್ಸವದಲ್ಲಿ ಹಾಜರಾಗಿ ವಾಪಾಸ್ಸಾಗುತ್ತಿದ್ದರು.
ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆ(ಎನ್‌ಡಿಆರ್ಎಫ್)ಯ ಸಿಬ್ಬಂದಿಗಳು 18 ಮೃತದೇಹಗಳನ್ನು ಹೊರತೆಗೆದಿದ್ದು, ಸಾವನ್ನಪ್ಪಿರುವವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಮಕ್ಕಳು ಹಾಗೂ ಮಹಿಳೆಯರು ಎಂಬುದಾಗಿ ತಿಳಿಸಿರುವ ಅವರು ಪರಿಹಾರ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಇನ್ನೊಂದು ಪ್ರತ್ಯೇಖ ಘಟನೆಯಲ್ಲಿ ಕಮಲಾ ಬಾಲನ್ ನದಿಯಲ್ಲಿ 17 ಮಂದಿಯನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮುಳುಗಿ ಎಂಟು ಮಂದಿ ಸಾವಿಗೀಡಾಗಿದ್ದಾರೆ. ದುರ್ಗಾ ದೇವಿಯನ್ನು ನದಿಯಲ್ಲಿ ವಿಸರ್ಜಿಸುವ ವೇಳೆಗೆ ಈ ದುರಂತ ಸಂಭವಿಸಿದೆ.