ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ವಿರದ್ಧದ ಪ್ರಕರಣವನ್ನು ಹಿಂತೆಗೆಯುವುದಾಗಿ ಕೇಂದ್ರವು ಸುಪ್ರೀಂಕೋರ್ಟಿಗೆ ಮಾಹಿತಿ ನೀಡಿರುವುದನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು, ಕ್ಟಟ್ರೋಚಿಯನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದೆ. "ಬೋಫೋರ್ಸ್ ಶಸ್ತ್ರಾಸ್ತ್ರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಟ್ರೋಚಿಗೆ ತುಂಬ ತಿಳಿದಿದೆ ಎಂಬ ಕಾರಣಕ್ಕಾಗಿ ಸರ್ಕಾರವು ಕ್ವಟ್ರೋಚಿಯನ್ನು ರಕ್ಷಿಸಲು ಯಾವಾಗಲೂ ಪ್ರಯತ್ನಿಸಿದೆ. ಕ್ವಟ್ರೋಚಿಯನ್ನು ಪ್ರಕರಣದಿಂದ ಸಂಪೂರ್ಣ ಮುಕ್ತವಾಗಿಸಲು ಸರ್ಕಾರ ಪ್ರಯತ್ನಿಸುತ್ತಿರುವುದಕ್ಕೆ ಇದೇ ಕಾರಣ" ಎಂಬುದಾಗಿ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಈ ಹಿಂದೆ ಯುಪಿಎ ಸರ್ಕಾರವು ಯಾವಾಗೆಲ್ಲ ಕ್ವಟ್ರೋಚಿಯನ್ನು ರಕ್ಷಿಸಲು ಪ್ರಯತ್ನಿಸಿತ್ತು ಎಂಬ ಉದಾಹರಣೆಗಳನ್ನು ನೀಡಿದ ಅವರು "2005ರಲ್ಲಿ ಪಾಸು ಮಾಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿಬಿಗೆ ಬಿಟ್ಟಿರಲಿಲ್ಲ. ಅರ್ಜೆಂಟೈನಾವು ಕ್ವಟ್ರೋಚಿ ಗಡಿಪಾರು ಮಾಡಲು ನಿರಾಕರಿಸಿ ನೀಡಿದ ಆದೇಶಕ್ಕೆ ಮೈಲ್ಮನವಿ ಸಲ್ಲಿಸಿರಲಿಲ್ಲ" ಎಂದು ಬೆಟ್ಟು ಮಾಡಿದರು.
"ನಮ್ಮ ಕಾನೂನು ಸಚಿವಾಲಯವು ನೀಡಿರುವ ವರದಿಯಾಧಾರದಲ್ಲಿ ಕ್ವಟ್ರೋಚಿ ಲಂಡನ್ ಬ್ಯಾಂಕೊಂದರಲ್ಲಿ ಇರಿಸಿದ್ದ ಹಣವನ್ನು ಬಿಡುಗಡೆ ಮಾಡಿತ್ತು. ಕ್ಟಟ್ರೋಚಿ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂಬುದಾಗಿ ಕಾನೂನು ಸಚಿವರು ಬಹಿರಂಗ ಹೇಳಿಕೆ ನೀಡಿದ್ದರು" ಎಂದು ಪ್ರಸಾದ್ ಹೇಳಿದ್ದರು.
"80ರ ದಶಕದಲ್ಲಿ ನಡೆದ ಈ ಪ್ರಕರಣದ ಕುರಿತು ಎನ್‌ಡಿಎಯು 1998ರಲ್ಲಿ ಅಧಿಕಾರಕ್ಕೆ ಬರುವ ತನಕ ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದ ಬಿಜೆಪಿ ವಕ್ತಾರರು, ನಮ್ಮ ಅಧಿಕಾರದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣ ಸುಪ್ರೀಂ ಕೋರ್ಟಿಗೆ ತೆರಳಿತು. ಈಗ ಸರ್ಕಾರವು ಬೋಫೋರ್ಸ್ ಪ್ರಕರಣದ ಎಲ್ಲಾ ಆರೋಪಿಗಳಿಗೆ ಸಹಾಯ ಮಾಡುತ್ತಿದೆ" ಎಂದು ದೂರಿದರು.
ರಾಜಕೀಯ ಅಜೆಂಡಾದಲ್ಲಿ ಕ್ವಟ್ರೋಚಿ ಪ್ರಕರಣವನ್ನು ಹುಗಿಯಲಾಗಿದೆ ಎಂದು ಇನ್ನೊಬ್ಬ ವಕ್ತಾರ ಪ್ರಕಾಶ್ ಜಾವಡೆಕರ್ ಹೇಳಿದ್ದಾರೆ. "ಕ್ವಟ್ರೋಚಿಯನ್ನು ಬಂಧಿಸಲು ಆರಂಭವಾಗಿರುವ ಪ್ರಕ್ರಿಯೆಯು 'ಕ್ವಟ್ರೋಚಿ ಉಳಿಸಿ' ಪ್ರಕ್ರಿಯೆಯಾಗಿದೆ. ಈ ರೀತಿಯಾಗಿ ಕಾಂಗ್ರೆಸ್ ಭ್ರಷ್ಟಾಚಾರವನ್ನು ನಿರ್ವಹಿಸುತ್ತಿದೆ. ಸರ್ಕಾರದ ನಿರ್ಧಾರವನ್ನು ನಾವು ಖಂಡಿಸುತ್ತೇವೆ" ಎಂದು ಜಾವಡೆಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ತೀವ್ರಟೀಕೆ ಮಾಡಿದ ಜೆಡಿಯು ಕ್ವಟ್ರೋಚಿ ವಿರುದ್ಧವಿರುವ ಎಲ್ಲಾ ಪ್ರಕರಣಗಳನ್ನು ಹಿಂತೆಗೆಯುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಜೆಡಿ-ಯು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ ಪ್ರಕರಣವನ್ನು ದುರ್ಬಲಗೊಳಿಸಲು ನಿರ್ಧರಿಸಿದೆ ಎಂದು ಹೇಳಿದೆ.
"ಸಿಬಿಐಯನ್ನು ರಾಜಕೀಯ ದಾಳವಾಗಿ ಕಾಂಗ್ರೆಸ್ ಸರ್ಕಾರ ಬಳಸಿದ್ದು, ಯಾವಾಗೆಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಆವಾಗೆಲ್ಲ ಬೋಫೋರ್ಸ್ ಲಂಚ ಹಗರಣ ದುರ್ಬಲವಾಗಿದೆ" ಎಂಬುದಾಗಿ ಜೆಡಿ-ಯು ಹಿರಿಯ ನಾಯಕ ಹಾಗೂ ವಕ್ತಾರ ಅರುಣ್ ಶ್ರೀವಾಸ್ತವ್ ಹೇಳಿದ್ದಾರೆ.
ಹಾಗಾಗಿ ಕಾಂಗ್ರೆಸ್‌ನ ಈ ನಿರ್ಧಾರದಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದೂ ಅವರು ಹೇಳಿದ್ದಾರೆ.
ರಾಜೀವ್ ಗಾಂಧಿ ಪ್ರಧಾನಿ ಆಗಿದ್ದ ವೇಳೆ 1986ರಲ್ಲಿ ಸ್ವೀಡನ್‌ನ ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ಬೋಫೋರ್ಸ್ ಎಬಿಯಿಂದ ಫಿರಂಗಿಗಳನ್ನು ಖರೀದಿಸುವ ವ್ಯವಹಾರದಲ್ಲಿ ಇಟಲಿ ಉದ್ಯಮಿಯಾಗಿರುವ ಒಟ್ಟಾವಿಯೋ ಕ್ಟಟ್ರೋಚಿ ಅವರು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದು ದೊಡ್ಡ ಮೊತ್ತದ ಲಂಚ ಪಡೆದಿದ್ದಾರೆ ಎಂದು ಆಪಾದಿಸಲಾಗಿದೆ. ಕ್ವಟ್ರೋಚಿ ಸೋನಿಯಾ ಗಾಂಧಿ ಅವರ ಕುಟಂಬ ಸ್ನೇಹಿತ ಎಂದೂ ಹೇಳಲಾಗಿದೆ.
ತಾನು ಯಾವುದೇ ತಪ್ಪು ಎಸಗಿಲ್ಲ ಎಂದು ಹೇಳಿರುವ ಕ್ವಟ್ರೋಚಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.