ನಾಲ್ಕು ತಿಂಗಳಿನಿಂದ ಸ್ಥಳೀಯರ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಶೋಪಿಯಾನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಂಗಳವಾರ ಮರು ಶವಪರೀಕ್ಷೆಯ ನಂತರ ಹೊಸ ತಿರುವು ಪಡೆದುಕೊಂಡಿದೆ.
ವಿಶೇಷ ಸಿಬಿಐ ತಂಡದ ರಕ್ಷಣೆಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞರು ಇಬ್ಬರು ಮಹಿಳೆಯರ ಶವಗಳನ್ನು ಮರಪರೀಕ್ಷೆ ನಡೆಸಿದ್ದಾರೆ. ಆ ಪ್ರಕಾರ 17ವರ್ಷದ ಆಸಿಯಾ ಅತ್ಯಾಚಾರಕ್ಕೆ ಒಳಗಾಗಿಲ್ಲ ಎಂದು ಶವ ಪರೀಕ್ಷೆ ನಡೆಸಿದ ಏಮ್ಸ್‌ನ ವೈದ್ಯರು ತಿಳಿಸಿದ್ದಾರೆ.
ಶವಪರೀಕ್ಷೆಯ ವರದಿಯನ್ನು ಮುಷಾವರತ್ ಮಜ್ಲಿನ್ ಇ ಸಮಿತಿ ಮುಂದೆ ಪ್ರಸ್ತುತ ಪಡಿಸಿದ ವೈದ್ಯರು, ಆಸಿಯಾ ಮೇಲೆ ಅತ್ಯಾಚಾರವಾಗಿಲ್ಲ ಎಂಬುದಕ್ಕೆ ಸಂಬಂಧಪಟ್ಟ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಏಮ್ಸ್ ವೈದ್ಯರ ತಂಡ ಸೋಮವಾರ ಮೃತ ಮಹಿಳೆಯರ ಕುಟುಂಬದವರ ಅನುಮತಿ ಮೇರೆಗೆ ಸಮಾಧಿಯಿಂದ ಶವಗಳನ್ನು ಹೊರತೆಗೆದು, ಶವಪರೀಕ್ಷೆಗೆ ಬೇಕಾದ ಅಂಗಾಂಗಗಳನ್ನು ಸಂಗ್ರಹಿಸಿದ್ದರು.
ನಾಲ್ಕು ತಿಂಗಳ ಹಿಂದೆ 22ವರ್ಷದ ನೀಲೋಫರ್ ಮತ್ತು ಆಕೆಯ ನಾದಿನಿ 17ವರ್ಷದ ಆಸಿಯಾ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಶವ ಮರಪರೀಕ್ಷೆಗೆ ಆದೇಶ ನೀಡಿತ್ತು.