ಸಿಪಿಐ ಮಾವೋವಾದಿಗಳ ಚಟುವಟಿಕೆಗಳನ್ನು ಬಲಪ್ರಯೋಗದಿಂದ ಹತ್ತಿಕ್ಕುವ ಕೇಂದ್ರಸರ್ಕಾರದ ಪ್ರಯತ್ನದ ವಿರುದ್ಧ ಮಾವೋವಾದಿ ನಕ್ಸಲೀಯರು ಸೆಡ್ಡು ಹೊಡೆದಿದ್ದು, ವಿಧ್ವಂಸಕಾರಿ ಚಟುವಟಿಕೆ ತೀವ್ರಗೊಳಿಸಿದ್ದಾರೆ.
ಭೀಕರ ದಾಳಿಯೊಂದರಲ್ಲಿ ನಕ್ಸಲರು ಜಾರ್ಖಂಡ್ ಪಾಕುರ್ ಜಿಲ್ಲೆಯ ಪನಾಂ ಕಲ್ಲಿದ್ದಲು ಗಣಿಯ ಸಹಾಯಕ ಮ್ಯಾನೇಜರ್ ಮತ್ತು ಉಪ ನಿರ್ದೇಶಕರನ್ನು ಹತ್ಯೆ ಮಾಡಿದ್ದಾರೆ. ಪಾಕುರ್ ಚೋಟಾಪಹಾರ್ ಪ್ರದೇಶದಲ್ಲಿ ಸೋಮವಾರ ಇಬ್ಬರು ಬೆಳಗಿನ ವಾಯುವಿಹಾರಕ್ಕೆ ತೆರಳುತ್ತಿದ್ದಾಗ ಅಜ್ಞಾತ ದುಷ್ಕರ್ಮಿಗಳು ಈ ದುಷ್ಕೃತವೆಸಗಿದ್ದಾರೆ.
ರಾಂಚಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್, ಪಲಾಮೌದ ಎಸ್‌ಬಿಐ ಶಾಖೆ ಮ್ಯಾನೇಜರ್ ಮತ್ತು ಗುಮ್ಲಾದಲ್ಲಿ ಸಹಾಯಕ ಎಂಜಿನಿಯರ್ ಹತ್ಯೆಯಾದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ಧನಾಬಾದ್ ಚಾರ್ಡ್ ವಿಭಾಗದ ಜರಾಂಡಿಯದಲ್ಲಿ ಮುಂಜಾನೆ 2.30ಕ್ಕೆ ರೈಲ್ವೆ ಹಳಿಗಳನ್ನು ನಕ್ಸಲರು ಸ್ಫೋಟಿಸಿದರೆಂದು ಧನಾಬಾದ್ ರೈಲ್ವೆ ವಿಭಾಗದ ಹಿರಿಯ ಸಾರ್ವಜನಿಕ ಅಧಿಕಾರಿ ತಿಳಿಸಿದ್ದಾರೆ.
ಆ ಮಾರ್ಗವಾಗಿ ಸಂಚರಿಸುತ್ತಿದ್ದ ಶಕ್ತಿಪುಂಜ್ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನೊಂದು ಘಟನೆಯಲ್ಲಿ ಸುಮಾರು 12 ಮಂದಿ ಶಸ್ತ್ರಸಜ್ಜಿತ ಮಾವೋವಾದಿಗಳು ಗಿರಿಧಿ ಇಸ್ರಿ ಪ್ರದೇಶದಲ್ಲಿ ಮೂರು ಟ್ರಕ್‌ಗಳಿಗೆ ಬೆಂಕಿ ಹಚ್ಚಿದರು. ಡುಮ್ರಿ-ಗಿರಿಧಿ ರಸ್ತೆಯಲ್ಲಿ ರಸ್ತೆಸಂಚಾರಕ್ಕೆ ತಡೆ ಒಡ್ಡಿದರೆಂದು ಗಿರಿಧಿ ಪೊಲೀಸ್ ಸೂಪರಿಂಟೆಂಡೆಂಟ್ ತಿಳಿಸಿದ್ದಾರೆ.
ಡುಮ್ರಿಯಿಂದ ಗ್ರಾಂಡ್ ಟ್ರಂಕ್ ರಸ್ತೆಯನ್ನು ಸಂಪರ್ಕಿಸುವ ಸೇತುವೆಯನ್ನು ಸ್ಫೋಟಕಗಳನ್ನು ಸಿಡಿಸಿ ಆಂಶಿಕ ಹಾನಿಗೊಳಿಸಿದ್ದಾರೆ.ಇದಕ್ಕೆ ಮುಂಚೆ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಸಾಲ್ ಎಲೆಗಳನ್ನು ತುಂಬಿದ್ದ ಟ್ರಕ್ಕಿಗೆ ನಕ್ಸಲರು ಬೆಂಕಿ ಹಚ್ಚಿದದಾರೆ. ಕೊಟ್ವಾಲಿ ಪ್ರದೇಶದ ನಯಾಗ್ರಾಮ್ ಪ್ರದೇಶದಲ್ಲಿ ಟ್ರಕ್ಕನ್ನು ನಿಲ್ಲಿಸಿದ ಸಿಪಿಐ ಕಾರ್ಯಕರ್ತರು ಚಾಲಕ ಮತ್ತು ಸಹಾಯಕನನ್ನು ಕೆಳಕ್ಕಿಳಿಸಿ ಟ್ರಕ್‌ಗೆ ಬೆಂಕಿ ಹಚ್ಚಿದ ಬಳಿಕ ಅರಣ್ಯದೊಳಕ್ಕೆ ಹೊಕ್ಕರೆಂದು ತಿಳಿದುಬಂದಿದೆ.