"ಮರಾಠಿ ಮತಗಳನ್ನು ಒಡೆಯಲು ಪ್ರಯತ್ನಿಸುವವರಿಗೆ ಅವರ ಜಾಗವನ್ನು ಮಹಾರಾಷ್ಟ್ರದ ಜನತೆ ತೋರಿಸಬೇಕು ಎಂಬುದಾಗಿ" ಹೇಳುವ ಮೂಲಕ ಶಿವಸೇನಾ ವರಿಷ್ಠ ಬಾಳಾ ಠಾಕ್ರೆ ಅವರು ತನ್ನ ಸಹೋದರನ ಪುತ್ರನಾಗಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
"ದೊಡ್ಡ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವ ಮೂಲಕ ಮರಾಠಿ ಮತಗಳನ್ನು ಒಡೆಯಲು ಯತ್ನಿಸುವವರಿಗೆ ಅವರ ಜಾಗ ಯಾವುದು ಎಂಬುದನ್ನು ತೋರಿಸಿ" ಎಂಬುದಾಗಿ ಅವರು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಮರಾಠಿ ಮತದಾರರಿಗೆ ಕರೆ ನೀಡಿದೆ. ಮರಾಠಿ ಮತಗಳು ಒಡೆಯುವುದನ್ನು ಸಹಿಸುವುದಿಲ್ಲ ಎಂಬುದನ್ನು ಅವರಿಗೆ ತೋರಿಸಿ ಎಂಬುದಾಗಿ ಠಾಕ್ರೆ ತನ್ನ ಬರಹದಲ್ಲಿ ಹೇಳಿದ್ದಾರೆ.
ಕಳೆದವಾರವೂ ಸಹ ರಾಜ್ ಠಾಕ್ರೆ ವಿರುದ್ಧ ಹರಿಹಾಯ್ದಿದ್ದ 83ರ ಹರೆಯದ ಠಾಕ್ರೆ, ಕೆಲವರ ಸಹಾಯ ಪಡೆದು ಕಾಂಗ್ರೆಸ್ ಮರಾಠಿ ಜನರನ್ನು ಒಡೆಯಲು ಯತ್ನಿಸುತ್ತಿದೆ ಎಂದು ರಾಜ್ ಹೆಸರನ್ನು ಪ್ರಸ್ತಾಪಿಸದೆಯೇ ಹೇಳಿದ್ದರು. ಅಲ್ಲದೆ, ಇಂತವರನ್ನು ನೀವು ಯಾಕೆ ನಂಬಬೇಕು ಎಂದು ಪ್ರಶ್ನಿಸಿದ್ದರು.
ಕಾಂಗ್ರೆಸ್ಸನ್ನು ಜನತೆ ಮತ್ತೆಮತ್ತೆ ಆಯ್ಕೆ ಮಾಡುತ್ತಿರುವುದಕ್ಕೆ ಜನರನ್ನು ದೂರಿರುವ ಅವರು, "ನಿಮಗೆ ಕಾಂಗ್ರೆಸ್ ಸರಿಯಿಲ್ಲ ಎಂದು ತಿಳಿದಿದ್ದರೂ ಮತ್ತೆಮತ್ತೆ ಅದೇ ಪಕ್ಷಕ್ಕೆ ನೀವು ಮತನೀಡುತ್ತೀರಿ" ಎಂದು ಹೇಳಿದ್ದಾರೆ.