ಮುಸ್ಲಿಂ ಲವ್ ಜಿಹಾದ್ ವಿರುದ್ಧ ಒಂದಾದ ಹಿಂದೂ-ಕ್ರಿಶ್ಚಿಯನ್ನರು
ತಿರುವನಂತಪುರಂ, ಮಂಗಳವಾರ, 13 ಅಕ್ಟೋಬರ್ 2009( 14:06 IST )
ಅಮಾಯಕ ಯುವತಿಯರ ಮೇಲೆ ಪ್ರೀತಿಯ ಬಲೆ ಬೀಸಿ ಅವರನ್ನು ಮತಾಂತರ ಮಾಡುವ 'ಲವ್ ಜಿಹಾದ್' ಎಂಬ ಧಾರ್ಮಿಕ ಮತಾಂತರ ಜಾಲದ ವಿರುದ್ಧ ಕಾರ್ಯಾಚರಿಸಲು ಪರಸ್ಪರ ವಿರೋಧಿ ಗುಂಪುಗಳಾಗಿದ್ದ ವಿಶ್ವಹಿಂದೂ ಪರಿಷತ್ ಹಾಗೂ ಕ್ರಿಶ್ಚಿಯನ್ ಗುಂಪುಗಳು ಕೇರಳದಲ್ಲಿ ಒಂದಾಗಿವೆ.
"ಈ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಲು ಈ ಎರಡು ಪಂಗಡಗಳು ಪರಸ್ಪರ ಕೈಜೋಡಿಸಲು ನಿರ್ಧರಿಸಿವೆ. ಲವ್ ಜಿಹಾದ್ ಜಾಲದ ಕಾರ್ಯಾಚರಣೆಗಳು ತಮ್ಮತಮ್ಮ ಧರ್ಮಕ್ಕೆ ತೀವ್ರ ಹೊಡೆತ ನೀಡಿದೆ" ಎಂದು ಈ ಸಂಘಟನೆಗಳು ಹೇಳಿವೆ.
"ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಹುಡುಗಿಯರು ಈ ಸಂಚಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ನಾವು ಈ ಪಿಡುಗನ್ನು ತೊಡೆದು ಹಾಕಲು ವಿಎಚ್‌ಪಿಗೆ ಸಹಕರಿಸುತ್ತೇವೆ. ನಾವು ಇದರ ವಿರುದ್ಧ ಜಂಟಿಯಾಗಿ ಸಾಧ್ಯವಿರುವ ಎಲ್ಲಾ ಕಾರ್ಯಗಳನ್ನೂ ಮಾಡಲು ಸಿದ್ದ" ಎಂಬುದಾಗಿ ಕೆ.ಎಸ್. ಸಾಮ್ಸನ್ ಹೇಳಿದ್ದಾರೆ. ಅವರು ಕೊಚ್ಚಿ ಮೂಲದ ಸಾಮಾಜಿಕ ಕಾರ್ಯದ ಕ್ರಿಶ್ಚಿಯನ್ ಸ್ವಯಂ ಸೇವಾ ಸಂಘಟನೆ(ಸಿಎಎಸ್ಎ)ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.
ಹಿಂದೂ ಸಮುದಾಯದ ಶಾಲಾಬಾಲಕಿಯೊಬ್ಬಳು ಈ ಲವ್ ಜಿಹಾದ್‌ನ ಬಲಿಪಶುವಾಗುತ್ತಿದ್ದಾಳೆ ಎಂಬುದನ್ನು ತಿಳಿದ ಸಿಎಎಸ್ಎ ಈ ಕುರಿತು ತಕ್ಷಣ ವಿಎಚ್‌ಪಿಗೆ ಮಾಹಿತಿ ನೀಡಿದೆ ಎಂಬುದಾಗಿ ತಿಳಿಸಿದ ಸಾಮ್ಸನ್, ಇಂತಹ ಪ್ರಕರಣಗಳಲ್ಲಿ ಕೇಸರಿ ಸಂಘಟನೆಯು ತಮ್ಮ ಸಂಘಟನೆಗೆ ಹಲವು ಪ್ರಕರಣಗಳಲ್ಲಿ ಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು 'ಹಿಂದೂ ಹೆಲ್ಪ್‌ಲೈನ್' ಒಂದನ್ನು ವಿಹಿಂಪ ಆರಂಭಿಸಿದ್ದು, ಕಳೆದ ಮೂರು ತಿಂಗಳಲ್ಲಿ ಇದು ಸಮಾರು 1,500 ಕರೆಗಳನ್ನು ಸ್ವೀಕರಿಸಿದೆ ಎಂದು ಅದು ಹೇಳಿದೆ. ಹೆಚ್ಚಿನವರು ತಮ್ಮ ಕಾರ್ಯವನ್ನು ಶ್ಲಾಘಿಸಲು ಕರೆ ಮಾಡಿದ್ದರೆ, ಮತ್ತೆ ಕೆಲವರಿಂದ ಬೆದರಿಕಾ ಕರೆಗಳನ್ನೂ ಸ್ವೀಕರಿಸಿರುವುದಾಗಿ ಈ ಹೆಲ್ಪ್‌ಲೈನ್ ಅನ್ನು ನಿರ್ವಹಿಸುತ್ತಿರುವ ವಿಹಿಂಪದ ವಿನೀಶ್ ಹೇಳಿದ್ದಾರೆ.
ಕ್ರಿಶ್ಚಿಯನ್ನರು ತಮ್ಮ ಮಕ್ಕಳ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿರುವ ಕೇರಳ ಕ್ಯಾಥೋಲಿಕ್ ಬಿಶಪ್‌ಗಳ ಮಂಡಳಿಯು ಈ ಕುರಿತು ಕೆಲವು ನಿರ್ದೇಶನಗಳನ್ನು ನೀಡಿದೆ. "ಇದು ಆಘಾತಕಾರಿ. ಇದು ಹಲವು ಕ್ರಿಶ್ಚಿಯನ್ ಕುಟುಂಬಗಳ ಮೇಲೆ ಪರಿಣಾಮ ಬೀರಿದೆ" ಎಂಬುದಾಗಿ ಮಂಡಳಿಯ ಸಾಮಾಜಿಕ ಸೌಹಾರ್ದ ಹಾಗೂ ವಿಚಕ್ಷಣ ಆಯೋಗದ ಕಾರ್ಯದರ್ಶಿಯಾಗಿರುವ ಫಾದರ್ ಜಾನಿ ಕೋಚುಪರಂಬಿಲ್ ತಿಳಿಸಿದ್ದಾರೆ.
"ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆಯಲ್ಲದೆ ಧಾರ್ಮಿಕ ಬಿಕ್ಕಟ್ಟಿಗೆ ಹಾದಿಯಾಗಬಹುದಾಗಿದ್ದು, ಈ ಕುರಿತು ನಾವು ತುಂಬ ಜಾಗೃತರಾಗಿದ್ದೇವೆ. ಈ ಕುರಿತು ಕೇರಳ ಹೈಕೋರ್ಟ್ ಸಹಿತ ಮಧ್ಯಪ್ರವೇಶ ಮಾಡಿದ್ದು, ನಾವು ಒಂದು ನಿಲುವನ್ನು ಹೊಂದಲು ನಿರ್ಧರಿಸಿದ್ದೇವೆ" ಎಂಬುದಾಗಿ ಕೋಚುಪರಂಬಿಲ್ ತಿಳಿಸಿದ್ದಾರೆ.
ಲವ್ ಜಿಹಾದ್ ಆರೋಪಗಳ ಕುರಿತು ತನಿಖೆ ನಡೆಸಿ ವರದಿ ನೀಡಲು ಹೈ ಕೋರ್ಟ್ ಡಿಜಿಪಿಗೆ ಆದೇಶ ನೀಡಿದೆ.