ಅರುಣಾಚಲಕ್ಕೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭೇಟಿ ನೀಡಿದ ಬಗ್ಗೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಉದ್ಧಟತನದ ವರ್ತನೆ ತೋರಿದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಅರುಣಾಚಲ ಪ್ರದೇಶವು ರಾಷ್ಟ್ರದ ಅವಿಭಾಜ್ಯ ಅಂಗವೆಂದು ಹೇಳಿದೆ.
ಚೀನಾದ ಹೇಳಿಕೆ ಬಗ್ಗೆ ತೀವ್ರ ಆತಂಕ ಮತ್ತು ನಿರಾಶೆ ವ್ಯಕ್ತಪಡಿಸಿದ ಸರ್ಕಾರ, ಅರುಣಾಚಲ ಪ್ರದೇಶ ಕುರಿತು ಭಾರತದ ನಿಲುವಿನ ಬಗ್ಗೆ ಚೀನಾಕ್ಕೆ ಚೆನ್ನಾಗಿ ಗೊತ್ತಿದ್ದು, ಅದನ್ನು ಅನೇಕ ಬಾರಿ ಚೀನಕ್ಕೆ ಮನವರಿಕೆ ಮಾಡಿದೆಯೆಂದು ಭಾರತ ತಿಳಿಸಿದೆ. ಈ ಕುರಿತು ಮಾತನಾಡಿದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಯಾರು ಏನೇ ಹೇಳಲಿ, ಅರುಣಾಚಲ ಭಾರತದ ಅವಿಭಾಜ್ಯ ಅಂಗವೆನ್ನುವುದು ಭಾರತದ ಸ್ಥಿರ ನಿಲುವು ಎಂದು ಪ್ರತಿಪಾದಿಸಿದರು.ಚೀನದ ರಾಯಭಾರಿ ಜಂಟಿ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ಭೇಟಿ ಮಾಡಿದ್ದು ಕೂಡ ಆಸಕ್ತಿದಾಯಕವಾಗಿದೆ.
ಆದರೆ ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ವಿದೇಶಾಂಗ ಸಚಿವರ ಸಮಾವೇಶ ಕುರಿತ ಪೂರ್ವನಿಗದಿತ ಭೇಟಿಯೆಂದು ವಿದೇಶಾಂಗ ಸಚಿವಾಲಯ ಸಮಜಾಯಿಷಿ ನೀಡಿದೆ. ಸಿಂಗ್ ಅವರು ಅರುಣಾಚಲ ಪ್ರದೇಶದ ಚುನಾವಣೆ ರ‌್ಯಾಲಿಯಲ್ಲಿ ಭಾಗವಹಿಸಲು ಅಲ್ಲಿಗೆ ಅ.3ರಂದು ಭೇಟಿ ಮಾಡಿದ್ದರು. ಇತ್ತೀಚೆಗೆ ಚೀನಾ ಅರುಣಾಚಲಪ್ರದೇಶದ ಅಭಿವೃದ್ಧಿಯೋಜನೆಗಳಿಗೆ ಎಡಿಬಿ ಸಾಲದ ಭಾಗ ನೀಡಲು ತಡೆಯೊಡ್ಡಿತ್ತು. ಟಿಬೆಟ್ ಧಾರ್ಮಿಕ ನಾಯಕ ದಲೈಲಾಮಾ ಅರುಣಾಚಲ ಭೇಟಿಗೆ ಕೂಡ ಚೀನಾ ಪ್ರತಿಭಟನೆ ಸೂಚಿಸಿತ್ತು.
ಚೀನಾ ಜಮ್ಮುಕಾಶ್ಮೀರದ 43,180 ಚ.ಕಿಮೀ ಪ್ರದೇಶವನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿದೆಯೆಂದು ಭಾರತ ಹೇಳುತ್ತಿದೆ. ಅರುಣಚಾಲ ಪ್ರದೇಶದಲ್ಲಿ ಭಾರತ 90,000 ಚದರ ಕಿಮೀ ಚೀನಾದ ಪ್ರದೇಶವನ್ನು ಹೊಂದಿರುವುದಾಗಿ ಚೀನಾ ಆರೋಪಿಸಿದೆ.