ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ತನ್ನ ಹೋಟೇಲಿಗೆ ಭೇಟಿ ನೀಡಿ ಒಂದು ಕಪ್ ಕಾಫಿ ಕುಡಿದಾಗ ಆಲಿವ್ ರೆಸ್ಟೋರೆಂಟ್‌ನ ಮಾಲಕ ಅಬ್ದುಲ್ ಅಜೀಜ್ ಅತೀವ ಸಂತಸ ಪಟ್ಟಿದ್ದರು. ಆತರೆ ಈ ಸಂತಸವೆಲ್ಲ ಜರ್ರನೆ ಇಳಿಯಲು ಹೆಚ್ಚು ದಿನವೇನೂ ಬೇಕಾಗಿರಲಿಲ್ಲ.
ಈ ಹೋಟೇಲಿನಲ್ಲಿ ನೈರ್ಮಲ್ಯ ಕಾಪಾಡಲಾಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಹೋಟೇಲ್ ಮುಚ್ಚುವಂತೆ ಆದೇಶ ನೀಡಲಾಗಿದೆ. ಆದರೆ, ಇದಕ್ಕೆ ತನ್ನ ಹೊಟ್ಟೆಕಿಚ್ಚಿನ ಮಿತ್ರರೇ ಕಾರಣ ಎಂಬುದು ಅಬ್ದುಲ್ ಅವರು ನೀಡುವ ಕಾರಣ. ರಾಹುಲ್ ತನ್ನ ಹೋಟೇಲ್‌ಗೆ ಭೇಟಿ ನೀಡಿದ ಬಳಿಕ ಲಭಿಸಿದ ಪುಕ್ಕಟೆ ಪ್ರಚಾರದಿಂದ ತನ್ನ ಎದುರಾಳಿಗಳು ಅಸೂಯೆಗೊಂಡ ಕಾರಣ ಅವರುಗಳು ತನ್ನ ಹೋಟೇಲ್ ವಿರುದ್ಧ ದೂರು ನೀಡಿದ್ದಾರೆ ಎಂಬುದಾಗಿ 53ರ ಹರೆಯದ ಅಜೀಜ್ ಹೇಳುತ್ತಾರೆ.
"ಆಲಿವ್ ರೆಸ್ಟೋರೆಂಟ್ ಎಂಬ ಹೆಸರಿನ ತನ್ನ ಹೋಟೇಲನ್ನು ಕೇವಲ ಒಂಬತ್ತು ತಿಂಗಳ ಹಿಂದಷ್ಟೆ ಆರಂಭಿಸಲಾಗಿತ್ತು. ಸುಮಾರು 60 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಹೋಟೇಲ್ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಕಟ್ಟಡದಲ್ಲಿದೆ. ರಾಹುಲ್ ತನ್ನ ಹೋಟೇಲಿಗೆ ಭೇಟಿ ನೀಡಿದ್ದ ವೇಳೆ ತಾನು ಇರಲಿಲ್ಲ. ರಾಹುಲ್‌ರೊಂದಿಗೆ ಹೋಟೇಲಿನ ಉದ್ಯೋಗಿಗಳು ಫೋಟೋವನ್ನು ತೆಗೆಸಿಕೊಂಡಿದ್ದರು. ರಾಹುಲ್ ಭೇಟಿಯಿಂದಾಗಿ ತನಗೆ ಸಾಕಷ್ಟು ಪ್ರಚಾರ ಲಭಿಸಿದ್ದು, ಇದು ಕೆಲವು ಮಂದಿಯಲ್ಲಿ ಅಸೂಯೆ ಹುಟ್ಟುವಂತೆ ಮಾಡಿದೆ" ಎಂಬುದಾಗಿ ಅಜೀಜ್ ಹೇಳಿದ್ದಾರೆ.
ರಾಹುಲ್ ಭೇಟಿ ಬಳಿಕ ನಮ್ಮ ಹೋಟೇಲಿನ ಸಿಬ್ಬಂದಿಯೊಬ್ಬನೊಂದಿಗೆ, ನಮ್ಮ ಹೋಟೇಲಿಗೆ ಆಗಾಗ ಭೇಟಿ ನೀಡುತ್ತಿದ್ದ ಕೆಲವು ಮಂದಿ ವಾಗ್ವಾದಕ್ಕಿಳಿದಿದ್ದರು. ಇವರು ತಮ್ಮ ಹೋಟೇಲ್‌ನಲ್ಲಿ ಸ್ವಚ್ಛತೆಯನ್ನು ಪಾಲಿಸಲಾಗುತ್ತಿಲ್ಲ ಮತ್ತು ನಾವು ನೀಡುತ್ತಿರುವ ನೀರು ಶುದ್ಧವಾಗಿಲ್ಲ" ಎಂದು ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ಅವರು ಹೇಳುತ್ತಾರೆ.
ಸಾರ್ವಜನಿಕ ಆರೋಗ್ಯಾಧಿಕಾರಿಯೊಬ್ಬರು ತನ್ನ ಹೋಟೇಲಿಗೆ ಸೋಮವಾರ ಭೇಟಿ ನೀಡಿದ್ದು, ಹೋಟೇಲನ್ನು ಒಂದುವಾರಗಳ ಕಾಲ ಮುಚ್ಚಿ, ಎಲ್ಲವನ್ನೂ ಶುಚಿಗೊಳಿಸಿ ಮತ್ತೆ ಆರಂಭಿಸುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಆರೋಗ್ಯಾಧಿಕಾರಿ ಹೇಳುವಂತೆ, ಅಜೀಜ್ ಹೋಟೇಲ್‌ನಲ್ಲಿ ಸ್ವಚ್ಛತೆ ಬಗ್ಗೆ ಲಕ್ಷ್ಯ ನೀಡದಿರುವುದು ತಮ್ಮ ಭೇಟಿಯ ವೇಳೆಗೆ ಕಂಡು ಬಂದಿತ್ತು. ಆಹಾರ ಇರಿಸಿದ್ದ ಜಾಗ ಸ್ವಚ್ಛವಾಗಿರಲಿಲ್ಲ. ಅಲ್ಲದೆ ನೀರು ನಿಂತಿರುವ ಜಾಗದಲ್ಲಿ ಹೋಟೇಲ್ ಇದೆ. ಹಾಗಾಗಿ ಒಂದು ವಾರ ಹೋಟೇಲನ್ನು ಮುಚ್ಚಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮತ್ತೆ ಆರಂಭಿಸುವಂತೆ ಸೂಚನೆ ನೀಡಿದ್ದೇವೆಯೇ ವಿನಹ ರಾಹುಲ್ ಭೇಟಿಗೂ ನಮ್ಮ ಈ ಆದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.