ಮೂರು ರಾಜ್ಯಗಳಲ್ಲಿ ಮಂಗಳವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಾಧಾರಣದಿಂದ ಭಾರೀಯಾಗಿ ಮತದಾನ ನಡೆದಿದೆ. ಅರುಣಾಚಲ ಪ್ರದೇಶದಲ್ಲಿ ಗರಿಷ್ಠ ಶೇ.72ರಷ್ಟು ಮತದಾನವಾಗಿದ್ದರೆ, ಮಹಾರಾಷ್ಟ್ರದಲ್ಲಿ ಶೇ.60ರಷ್ಟು ಮತದಾನವಾಗಿದ್ದು, ಹರ್ಯಾಣದಲ್ಲಿ ಶೇ. 66ರಷ್ಟು ಮತದಾನವಾಗಿದ್ದು ಸರಾಸರಿ ಶೇ. 66ರಷ್ಟು ಮತದಾನವಾಗಿದೆ ಎಂಬುದಾಗಿ ಪ್ರಾಥಮಿಕ ವರದಿಗಳು ಹೇಳಿವೆ.
ಈ ಮಧ್ಯೆ ಮಂಗಳವಾರದ ಮತದಾನವೇಳೆ ವ್ಯಾಪಕ ಹಿಂಸಾಚಾರ ನಡೆದಿದ್ದು, 48ರ ಹರೆಯದ ಜ್ಯೋತಿ ರಾಮ್ ಎಂಬ ಪೋಲಿಂಗ್ ಏಜೆಂಟ್ ಸಾವನ್ನಪ್ಪಿದ್ದಾರೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ನಕ್ಸಲರು ಮತಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ.
ಹರ್ಯಾಣದ ಕೈತಾಲ್ ಜಿಲ್ಲೆಯ ಗುಲ್ಹಾ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ದಿಲ್ಲು ರಾಮ್ ಹಾಗೂ ಸ್ವತಂತ್ರ ಅಭ್ಯರ್ಥಿ ಕುಲ್ವಂತ್ ಬಾಜಿಗರ್ ಅವರ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದಾಗ ಮಧ್ಯ ಸಿಲುಕಿದ ಜ್ಯೋತಿ ರಾಮ್ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ 17 ಪೊಲೀಸರನ್ನು ನಕ್ಸಲರು ಗುಂಡುಹಾರಿಸಿ ಕೊಂದಿದ್ದ ಮಹಾರಾಷ್ಟ್ರದ ಗಾಡ್ಚಿರೋಲಿ ಜಿಲ್ಲೆಯಲ್ಲಿ, ಮಂಗಳವಾರವೂ ಸಹ ನಕ್ಸಲರು ಗಸ್ತು ತಿರುಗುತ್ತಿದ್ದ ಪಕ್ಷದ ಮೇಲೆ ಗುಂಡು ಹಾರಿಸಿದ್ದಾರೆ. ಮತದಾನ ಆರಂಭವಾಗುವ ಮುನ್ನ ಅಹೇರಿ ಕ್ಷೇತ್ರದ ಕನಸುರ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿರುವ ಪೊಲೀಸರು, ತಾವು ಪ್ರತಿದಾಳಿ ನಡೆಸಿಲ್ಲ ಎಂದೂ ಹೇಳಿದ್ದಾರೆ.
ಇದೇ ಜಿಲ್ಲೆಯ ಕೊರ್ಚಿ ತಾಲೂಕಿನ ಬೊಂದೆ ಎಂಬ ಮತಗಟ್ಟೆಯಲ್ಲಿ ನಕ್ಸಲರು ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲೂ ಯೂರಿಗೂ ಗಾಯಗಳಾಗಿಲ್ಲ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್, ಉದ್ಯಮಿ ಅನಿಲ್ ಅಂಬಾನಿ, ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ, ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ಚಿತ್ರ ನಟಿ ನಗ್ಮಾ ಸೇರಿದಂತೆ ಪ್ರಮುಖರು ಮತಚಲಾವಣೆ ಮಾಡಿದರು.
ಮೂರೂ ರಾಜ್ಯಗಳಲ್ಲೂ ಅಕ್ಟೋಬರ್ 22ರಂದು ಮತಎಣಿಕೆ ನಡೆಯಲಿದೆ.