ಅಸ್ಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ: ಸಮೀಕ್ಷೆ
ನವದೆಹಲಿ, ಬುಧವಾರ, 14 ಅಕ್ಟೋಬರ್ 2009( 11:50 IST )
ಚುನಾವಣಾ ನಂತರದ ಸಮೀಕ್ಷೆಯನ್ನು ನಂಬುವುದಾದರೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವು ಮತ್ತೆ ಅಧಿಕಾರಕ್ಕೆ ಬರಲಿದೆ. ಇದೇ ವೇಳೆ ಹರ್ಯಾಣ ಹಾಗೂ ಅರುಣಾಚಲ ಪ್ರದೇಶದಲ್ಲೂ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಲಿದೆ.
ಮಹಾರಾಷ್ಟ್ರದ ಸ್ಥಳೀಯ ವಾಹಿನಿಯೊಂದರ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಮೈತ್ರಿಕೂಟವು 288 ಸ್ಥಾನದ ವಿಧಾನಸಭೆಯಲ್ಲಿ 135ರಿಂದ 145 ಸ್ಥಾನಗಳನ್ನು ಪಡೆಯಲಿದೆ. ಇದರಲ್ಲಿ ಕಾಂಗ್ರೆಸ್ 75-85ರಷ್ಟು ಬಾಚಿಕೊಂಡರೆ, ಅದ ಮಿತ್ರಪಕ್ಷ ಎನ್‌ಸಿಪಿಯು 55-65 ಸ್ಥಾನಗಳನ್ನು ಗಳಿಸಲಿದೆ.
ಶಿವಸೇನಾ-ಬಿಜೆಪಿ ಮೈತ್ರಿಕೂಟವು 55-65 ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿಯು 45-55 ಸ್ಥಾನಗಳನ್ನು ಮಡಿಲಿಗೆ ಹಾಕಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಇದೇವೇಳೆ, ರಾಜ್ ಠಾಕ್ರೆ ಅವರ ಎಂಎನ್ಎಸ್ 8-12 ಸ್ಥಾನಗಳನ್ನು ಗಳಿಸಿದರೆ, ಇತರ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು 25-35 ಸ್ಥಾನಗಳನ್ನು ಪಡೆಯಲಿದ್ದಾರೆ.
ಇನ್ನೊಂದು ಸುದ್ದಿವಾಹಿನಿಯ ಪ್ರಕಾರ ಕಾಂಗ್ರೆಸ್ 89, ಎನ್‌ಸಿಪಿ 48 ಸ್ಥಾನಗಳನ್ನು ಪಡೆಯಲಿವೆ. ಸರಳ ಬಹುಮತಕ್ಕೆ ಅವಶ್ಯವಿರುವ 145 ಸ್ಥಾನಗಳಿಗಿಂತ ಕೊಂಚ ಹಿನ್ನಡೆಯನ್ನು ಮೈತ್ರಿ ಕೂಟ ಎದುರಿಸಲಿದೆ ಎಂದು ಅದು ಅಂದಾಜಿಸಿದೆ. ಈ ಸಮೀಕ್ಷೆಯ ಪ್ರಕಾರ ಶಿವಸೇನೆಯು 62 ಸ್ಥಾನಗಳನ್ನು ಪಡೆದರೆ ಬಿಜೆಪಿ 51 ಸ್ಥಾನಗಳನ್ನು ಮತ್ತು ಎಂಎನ್ಎಸ್ 12, ರಿಪಬ್ಲಿಕನ್ ಪಾರ್ಟಿ ನೇತೃತ್ವದ ಮೈತ್ರಿಕೂಟ 5 ಹಾಗೂ ಇತರರು 21 ಸ್ಥಾನಗಳನ್ನು ಗಳಿಸಿಕೊಳ್ಳಲಿವೆ ಎಂದು ಹೇಳಿದೆ.
ಹರ್ಯಾಣದ 90 ಸ್ಥಾನಗಳಲ್ಲಿ ಕಾಂಗ್ರೆಸ್ 57 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಐಎನ್ಎಲ್‌ಡಿಯು 18 ಸ್ಥಾನಗಳನ್ನು ಗಳಿಸಿದರೆ, ಹರ್ಯಾಣ ಜನಹಿತ ಕಾಂಗ್ರೆಸ್ 9, ಬಿಎಸ್ಪಿ 3, ಬಿಜೆಪಿ 1 ಹಾಗೂ ಇತರರು 3ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂಬುದಾಗಿ ಸಮೀಕ್ಷೆಯ ಫಲಿತಾಂಶ ಹೇಳುತ್ತದೆ.
ಇದೇ ವೇಳೆ, ಚೀನ ತನ್ನದೆಂದು ಹೇಳುತ್ತಿರುವ ಅರುಣಾಚಲ ಪ್ರದೇಶದಲ್ಲೂ ಕಾಂಗ್ರೆಸ್ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆಗಳು ಹೇಳಿವೆ.