ಭಾರತದ ಕೆಲವು ಇಲಾಖೆಗಳು ಹಾಗೂ ಸಚಿವಾಲಯಗಳು ಅಮೆರಿಕದ ಕಂಪನಿಗಳಿಂದ ಭಾರಿ ಲಂಚ ಪಡೆದಿವೆ ಎಂಬುದಾಗಿ ಬಿಜೆಪಿ ಆರೋಪಿಸಿರುವ ಒಂದು ದಿನದ ಬಳಿಕ, ಈ ಕುರಿತು ಸಿಬಿಐ ಈಗಾಗಲೇ ಪ್ರಕರಣ ಒಂದರ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
ಅಮೆರಿಕಕ್ಕೆ ಭಾರತೀಯ ರಾಯಭಾರಿಯಾಗಿರುವ ಮೀರಾಶಂಕರ್ ಅವರು ತಮ್ಮ ಪತ್ರದಲ್ಲಿ ಹೆಸರಿಸಿರುವ ಕೃಷಿಸಚಿವಾಲಯದ ಪ್ರಕರಣ ಒಂದರ ಕುರಿತಂತೆ ಈಗಾಗಲೇ ತನಿಖೆ ಆರಂಭಗೊಂಡಿದ್ದರೆ, ಉಳಿದ ಎಲ್ಲಾ ಇಲಾಖೆಗಳ ವಿರುದ್ಧ ಆಂತರಿಕ ತನಿಖೆಗಳು ನಡೆಯುತ್ತಿವೆ ಎನ್ನಲಾಗಿದೆ.
ಕೇಂದ್ರ ಕ್ರಿಮಿನಾಶಕ ಮಂಡಳಿ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಉಳಿದಂತೆ, ರಕ್ಷಣಾ ಇಲಾಖೆ, ರೈಲ್ವೆ ಮಂಡಳಿ, ಕಂದಾಯ ಇಲಾಖೆ ಮತ್ತು ಮಹಾರಾಷ್ಟ್ರ ಸರ್ಕಾರಗಳಿಂದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ವರದಿ ಕೇಳಿದೆ ಎಂದು ಪ್ರಧಾನಿ ಸಚಿವಾಲಯದ ಮೂಲಗಳು ತಿಳಿಸಿವೆ. ಈ ತಿಂಗಳ ಅಂತ್ಯದಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ.
ಮೀರಾ ಶಂಕರ್ ಅವರ ಪತ್ರವನ್ನು ಮೇ 12ರಂದೇ ಸ್ವೀಕರಿಸಿದ್ದರೂ, ಚುನಾವಣೆಗಳ ಕಾರಣ ಜೂನ್ ಒಂದರ ಬಳಿಕವಷ್ಟೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಸರ್ಕಾರವು ಇದನ್ನು ಸಿಬಿಐನ ನೋಡಲ್ ಸಚಿವಾಲಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಶಿಫಾರಸ್ಸು ಮಾಡಿತ್ತು.
ಅಮೆರಿಕ ಕಂಪೆನಿಗಳು ಒಳಗೊಂಡಿರುವ ಭ್ರಷ್ಟಾಚಾರದ ಏಳು ಪ್ರಕರಣದ ಕುರಿತು ಪತ್ರದಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ನಾಲ್ಕು ಪ್ರಕರಣಗಳು ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿದ್ದಾಗ ನಡೆದಿದೆ ಎಂದು ಹೇಳಲಾಗಿದೆ.
ಪ್ರಧಾನಿ ಕಚೇರಿಯು ಇದನ್ನು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ಶಿಫಾರಸ್ಸು ಮಾಡಿದ ಬಳಿಕ, ಅದು ಪ್ರತಿಯಾಗಿ ಪತ್ರವನ್ನು ರೈಲ್ವೇ, ಕೃಷಿ ಹಾಗೂ ರಕ್ಷಣಾ ಸಚಿವಾಲಯ, ಮಹಾರಾಷ್ಟ್ರ ಸರ್ಕಾರ ಹಾಗೂ ಕಂದಾಯ ಇಲಾಖೆ(ಜ್ಯಾರಿ ನಿರ್ದೇಶನಾಲಯ)ಕ್ಕೆ ಕಳುಹಿಸಿತ್ತು.