ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಚೀನಾ ವ್ಯಕ್ತಪಡಿಸಿದ ಪ್ರತಿಭಟನೆಗೆ ರಾಜ್ಯದ ಜನತೆ ಖಾರವಾದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಅರುಣಾಚಲ ಪ್ರದೇಶಕ್ಕೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.72 ಮತದಾರರು ಹಕ್ಕು ಚಲಾಯಿಸಿದ್ದು, ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಚಲಾಯಿಸುವಲ್ಲಿ ಸ್ಥಳೀಯರಲ್ಲಿರುವ ಜಾಗೃತಿ ಮತ್ತು ಪ್ರೇರಣೆಗೆ ಸಾಕ್ಷಿಯೊದಗಿಸಿದೆ.
ಸ್ಥಳೀಯರಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆ ತೀವ್ರವಾಗಿದ್ದು, ಚೀನಾದ ವಿರುದ್ಧ ಯಾರೂ ಹೋರಾಟ ಮಾಡಬೇಕಾದ ಅಗತ್ಯವಿಲ್ಲ. ಏಕೆಂದರೆ ರಾಜ್ಯದ ಮತದಾರರೇ ತಮ್ಮ ಮತಗಳ ಮೂಲಕ ಉತ್ತರನೀಡುತ್ತಾರೆಂದು ಮತದಾರರಲ್ಲೊಬ್ಬರು ವರದಿಗಾರರಿಗೆ ತಿಳಿಸಿದರು.ಚೀನಾದ ಪ್ರತಿಭಟನೆಗೆ ಉತ್ತರಿಸಿದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅರುಣಾಚಲ ಭಾರತದ ಅವಿಭಾಜ್ಯ ಅಂಗವಾಗಿದ್ದು ಅದನ್ನು ಯಾರೂ ಪ್ರಶ್ನಿಸುವಂತಿಲ್ಲವೆಂದು ಮಾತಿನ ಚಾಟಿ ಬೀಸಿದ್ದರು.
ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಚೀನಾದ ಆಕ್ರಮಣಕಾರಿ ಧೋರಣೆಯ ಸಂಕೇತಗಳು ಸ್ಪಷ್ಟವಾಗಿದ್ದರೂ, ಭಾರತದ ಸರ್ಕಾರ ಈ ಕುರಿತು ಮೇಲುಧ್ವನಿಯನ್ನು ಎತ್ತಿಲ್ಲ. ಆದಾಗ್ಯೂ, ಚೀನಾದ ಪ್ರತಿಭಟನೆಯಿಂದ ಉದ್ವಿಗ್ನ ವಾತಾವರಣ ಉಂಟಾಗಿದ್ದು, ದ್ವಿಪಕ್ಷೀಯ ಮಾತುಕತೆಯ ಸುಗಮ ನಿರ್ಹವಣೆಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.