ಯಾರೊ ತಮ್ಮನ್ನು ಹತ್ಯೆ ಮಾಡಲು ಪಿತೂರಿ ರೂಪಿಸಿದ್ದಾರೆಂದು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ. ಕೊಲ್ಕತಾದ ಸಾಲ್ಟ್ ಲೇಕ್ ಉಪನಗರದಲ್ಲಿ ತಮ್ಮ ವಾಹನಕ್ಕೆ ಪ್ರೆಸ್ ಸ್ಟಿಕರ್ ಅಂಟಿಸಿದ್ದ ಕಾರೊಂದು ಡಿಕ್ಕಿ ಹೊಡೆಯಲು ಯತ್ನಿಸಿತೆಂದು ಅವರು ಹೇಳಿದ್ದಾರೆ. ಮೂವರು ಜನರಿದ್ದ, ಅವರಲ್ಲಿ ಇಬ್ಬರು ಕ್ಯಾಮೆರಾದೊಂದಿಗೆ ತಮ್ಮ ವಾಹನದ ಬೆಂಗಾವಲಲ್ಲಿ ನುಸುಳಿ ತೀರಾ ಸಮೀಪಕ್ಕೆ ಬಂದಿದ್ದರೆಂದು ಅವರು ಆರೋಪಿಸಿದರು.
ತಾವು ಸಮಾರಂಭ ಮುಗಿಸಿಕೊಂಡು ಮನೆಗೆ ತಡವಾಗಿ ತೆರಳುತ್ತಿದ್ದಾಗ ಬೀದಿ ದೀಪವಿರಲಿಲ್ಲ. ಬಿಳಿಯ ಕಾರೊಂದು ಬೆಂಗಾವಲು ವಾಹನಗಳನ್ನು ಹಾದು ತಮ್ಮ ಕಾರಿನ ಹಿಂಭಾಗಕ್ಕೆ ಬಂದು ಡಿಕ್ಕಿ ಹೊಡೆಯಲು ಯತ್ನಿಸಿತೆಂದು ಅವರು ಹೇಳಿದ್ದಾರೆ. ಅದನ್ನು ತಪ್ಪಿಸಲು ನಾವು ಬಳಸುದಾರಿಯಲ್ಲಿ ಹೋದರೂ ಪುನಃ ಕಾರು ವಾಪಸು ಬಂದಿತೆಂದು ಅವರು ವಿವರಿಸಿದ್ದಾರೆ. ಇದೇ ರೀತಿ ನಾಲ್ಕೈದು ಬಾರಿ ಸಂಭವಿಸಿದ್ದು, ನಮ್ಮ ಬೆಂಗಾವಲಿನ ಪೊಲೀಸರಿಗೆ ಗುಂಡುಹಾರಿಸದಂತೆ ತಿಳಿಸಿದ್ದಾಗಿ ಮಮತಾ ಹೇಳಿದ್ದಾರೆ.
ಕಾರಿನಲ್ಲಿದ್ದವರು ಮಮತಾರನ್ನು ಹತ್ಯೆ ಮಾಡಲು ಉದ್ದೇಶಿಸಿದ್ದ ಬಾಡಿಗೆ ಹಂತಕರು ಇರಬಹುದೆಂದು ಮಮತಾ ಅವರನ್ನು ಜತೆಗೂಡಿದ್ದ ರಾಜ್ಯ ನೌಕಾಯಾನ ಸಚಿವ ಮುಕುಲ್ ರಾಯ್ ಮತ್ತು ರಾಜ್ಯಘಟಕದ ಸುಬ್ರತಾ ಬಕ್ಷಿ ಶಂಕಿಸಿದ್ದಾರೆ.ಪಶ್ಚಿಮ ಬಂಗಾಳ ಗೃಹಇಲಾಖೆ ಮತ್ತು ರಾಜ್ಯದ ಸಿಪಿಎಂ ಮುಖ್ಯಕಚೇರಿಯು ಮಮತಾ ಹತ್ಯೆಗೆ ಸಂಚು ರೂಪಿಸಿದೆಯೆಂದು ರಾಯ್ ಆರೋಪಿಸಿದ್ದಾರೆ.