ಸಂಸತ್ತು ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಒತ್ತಾಯಿಸಲು ಶಿಯಾ ವೈಯಕ್ತಿಕ ಕಾನೂನು ಮಂಡಳಿಯು ಸಿದ್ಧತೆ ನಡೆಸಿದೆ. ಮಂಡಳಿಯ ವಾರ್ಷಿಕ ಸಮಾವೇಶವು ಅಕ್ಟೋಬರ್ 25ರಂದು ನಡೆಯಲಿದ್ದು, ಈ ಕುರಿತು ಮಸೂದೆಯೊಂದನ್ನು ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಶಿಯಾ ಮುಸ್ಲಿಮರ ಕುರಿತಾದ ರಾಷ್ಟ್ರೀಯ ನೀತಿಯನ್ನು ಈ ಸಮಾವೇಶದಲ್ಲಿ ಘೋಷಿಸಲಾಗುವುದು ಮತ್ತು ವಿಶ್ವಾದ್ಯಂತ ಉಗ್ರಗಾಮಿ ಚಟುವಟಿಕೆಗಳನ್ನು ಖಂಡಿಸುವ ಮಸೂದೆ ಒಂದನ್ನೂ ಈ ಸಂದರ್ಭದಲ್ಲಿ ಅಂಗೀಕರಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಮೌಲಾನಾ ಮಿರ್ಜಾ ಮೊಹಮ್ಮದ್ ಅತರ್ ಹೇಳಿದ್ದಾರೆ. ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸಂಸತ್ತಿನಲ್ಲಿ ದಲಿತರಿಗೆ ಮೀಸಲಾತಿ ಕೋಟಾ ಇರುವಂತೆಯೇ ತಮ್ಮ ಸಮುದಾಯಕ್ಕೂ ಮೀಸಲಾತಿಗಾಗಿ ಮಂಡಳಿಯು ಒತ್ತಾಯಿಸಲಿದೆ ಎಂದು ಹೇಳಿರುವ ಅವರು, ಶಿಯಾಗಳ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಅವರಿಗೆ ಸರ್ಕಾರಿ ಉದ್ಯೋಗಗಳಲ್ಲೂ ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಭಾರತದ ಆಂತರಿಕ ವಿಚಾರಗಳಲ್ಲಿ ಕೆಲವು ಮುಸ್ಲಿಂ ರಾಷ್ಟ್ರಗಳು ಮೂಗು ತೂರಿಸುವುದರ ವಿರುದ್ಧವೂ ಶಿಯಾ ಸಮುದಾಯವು ತನ್ನ ಕಳವಳದ ಕುರಿತು ದನಿ ಎತ್ತಲಿದೆ ಎಂದೂ ಅವರು ತಿಳಿಸಿದ್ದಾರೆ. ಇದೇ ವೇಳೆ ಶಿಯಾ ಸಮುದಾಯದಲ್ಲಿ ಧಾರ್ಮಿಕ ಸುಧಾರಣೆಗಳು ಹಾಗೂ ಶೈಕ್ಷಣಿಕ ವಿಚಾರಗಳ ಕುರಿತು ಇನ್ನೊಂದು ಮಸೂದೆಯನ್ನು ಅಂಗೀಕರಿಸಲಾಗುವುದು ಎಂದು ಅವರು ಹೇಳಿದ್ದಾರೆ.