ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಸರಣಿ ನಕ್ಸಲ್ ಹಿಂಸಾಚಾರಗಳಲ್ಲಿ ಕೈವಾಡ ಹೊಂದಿರುವ ಆಂಧ್ರಪ್ರದೇಶ ಮೂಲದ ದಂಪತಿಯನ್ನು ಬಂಧಿಸಲಾಗಿದೆ. ಕೃಷಿ ಸಚಿವ ಮತ್ತು ಮಾವೋವಾದಿ ಕೇಂದ್ರ ಸಮಿತಿ ಸದಸ್ಯರಾದ ರವಿಶರ್ಮಾ ಮತ್ತು ಪತ್ನಿ ಬಿ.ಅನುರಾಧಾ ಅವರನ್ನು ಅ.10ರಂದು ಬಂಧಿಸಿರುವುದಾಗಿ ಹಜಾರಿಬಾಗ್ ಪೊಲೀಸ್ ಸೂಪರಿಂಟೆಂಡೆಂಟ್ ತಿಳಿಸಿದ್ದಾರೆ.
ಬಿಹಾರ್ ಮತ್ತು ಜಾರ್ಖಂಡ್‌ನಲ್ಲಿ ಇವರಿಬ್ಬರು ಮಾವೊವಾದಿ ಸಂಘಟನೆಯನ್ನು ನಡೆಸುತ್ತಿದ್ದರು. ರವಿ ಶರ್ಮಾ, ಅರ್ಜುನ್,ಮಹೇಶ್, ಅಶೋಕ್ ಮುಂತಾದ ವಿವಿಧ ನಾಮಾಂಕಿತನಾದ ಇವನು ಪತ್ನಿ ಅನುರಾಧಾ ಅಲಿಯಾಸ್ ರಜಿತಾ ಜತೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ 1999ರಿಂದ ಮಾವೋವಾದಿ ಸಂಘಟನೆಯನ್ನು ನಡೆಸುತ್ತಿದ್ದನೆಂದು ಅವರು ಮಾಹಿತಿ ನೀಡಿದರು.
ಉಭಯ ರಾಜ್ಯಗಳಲ್ಲಿ ನಕ್ಸಲೀಯರ ಹಿಂಸಾಚಾರ ದಿಢೀರ್ ಉಲ್ಬಣಕ್ಕೆ ದಂಪತಿ ದ್ವಯರು ಕಾರಣವೆಂದು ಅವರು ಹೇಳಿದ್ದು, ಇವರ ಬಂಧನದಿಂದ ಮಾವೋವಾದಿ ಆಂದೋಳನಕ್ಕೆ ಪೆಟ್ಟು ಬಿದ್ದಿರುವುದಾಗಿ ಹೇಳಿದ್ದಾರೆ. ಆರೋಪಿಗಳಿಂದ ವಶಕ್ಕೆ ತೆಗೆದುಕೊಂಡ ಲ್ಯಾಪ್‌ಟಾಪ್‌ನಲ್ಲಿ ಮಾವೋವಾದಿ ಆಂದೋಳನದ ಇಡೀ ಕಾರ್ಯತಂತ್ರವನ್ನು ದಾಖಲು ಮಾಡಲಾಗಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.ಅವರ ಬಳಿ ಪತ್ತೆಯಾದ ದಿನಚರಿಗಳು ಮತ್ತು ಪತ್ರಗಳಲ್ಲಿ ಬಹು ಮುಖ್ಯಮಾಹಿತಿಗಳು ಲಭ್ಯವಾಗಿವೆಯೆಂದು ಅವರು ಹೇಳಿದ್ದಾರೆ.