ಲೋಕಸಭೆ ಹಾಗೂ ವಿಧಾನ ಸಭಾ ಚುನಾವಣೆಗಳಲ್ಲಿ ಪಕ್ಷದ ದುರ್ಬಲ ಫಲಿತಾಂಶದ ಹಿನ್ನೆಲೆಯಲ್ಲಿ ರಾಜಸ್ಥಾನ ವಿಪಕ್ಷ ನಾಯಕಿ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಕುರಿತು ನಿರ್ಧಾರವನ್ನು ಬಿಜೆಪಿ ಸಂಸದೀಯ ಮಂಡಳಿಯು ಮುಂದೂಡಿರುವ ಕಾರಣ ವಸುಂಧರಾ ರಾಜೆ ಅವರು ಮತ್ತೊಂದು ಜೀವದಾನ ಪಡೆದಿದ್ದಾರೆ.
ತಾನಾಗಿಯೇ ಹುದ್ದೆ ತ್ಯಜಿಸಲಾರೆ ಎಂಬುದಾಗಿ ವಸುಂಧರಾ ಪಟ್ಟು ಹಿಡಿದಿದ್ದು, ಇದರಿಂದಾಗಿ ಅವರ ರಾಜೀನಾಮೆ ಕುರಿತು ನಿರ್ಧಾರ ಕೈಗೊಳ್ಳಲು ಗುರವಾರ ಸಭೆ ಸೇರಿ ಸುಮಾರು ಮೂರು ಗಂಟೆಗಳ ಕಾಲ ಚರ್ಚಿಸಿದರೂ, ನಿರ್ಧಾರ ಒಂದನ್ನು ಕೈಗೊಳ್ಳಲು ಸಂಸದೀಯ ಮಂಡಳಿಗೆ ಸಾಧ್ಯವಾಗದ ಕಾರಣ ಇದನ್ನು ಮತ್ತೆ ಮುಂದೂಡಲಾಗಿದೆ.
ಸಂಸದೀಯ ಮಂಡಳಿಯ ಸಭೆಯು ಮತ್ತು ಅಕ್ಟೋಬರ್ 22ರಂದು ನಡೆಲಿದ್ದು ಆ ದಿನ ಮತ್ತೆ ಈ ವಿಚಾರವನ್ನು ಕೈಗೆತ್ತಿಕೊಳ್ಳಲಾಗುವುದು ಎಂಬುದಾಗಿ ಮಂಡಳಿಯ ನಿಕಟ ಮೂಲಗಳು ತಿಳಿಸಿವೆ.
ಅದಾಗ್ಯೂ, ರಾಜಸ್ಥಾನದಲ್ಲಿ ನವೆಂಬರ್ ಏಳರಂದು ಉಪಚುನಾವಣೆ ನಡೆಯಲಿರುವ ಕಾರಣ ಆ ತನಕ ಯಾವುದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಬಹಳ ಕಡಿಮೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ವಸುಂಧಾರ ರಾಜೆ ಅವರಿಗೆ ಬುಧವಾರ ದೆಹಲಿಗೆ ಬರುವಂತೆ ಬುಲಾವ್ ನೀಡಲಾಗಿತ್ತಾದರೂ, ವೆಂಕಯ್ಯ ನಾಯ್ಡು ಅವರ ಅನುಪಸ್ಥಿತಿಯ (ಅವರು ವಿದೇಶ ಪ್ರವಾಸದಲ್ಲಿದ್ದಾರೆ) ಕಾರಣ ನೀಡಿ ರಾಜೆ ದೆಹಲಿಗೆ ಆಗಮಿಸಿರಲಿಲ್ಲ. ನಾಯ್ಡು ಅವರು ಈ ಒಟ್ಟಾರೆ ವಿಚಾರದ ಕೇಂದ್ರ ಬಿಂದುವಾಗಿದ್ದಾರೆ.
ಮುರಳಿ ಮನೋಹರ್ ಜೋಷಿ, ಗೋಪಿನಾಥ್ ಮುಂಡೆ, ವೆಂಕಯ್ಯ ನಾಯ್ಡು ಹಾಗೂ ಬಾಳ್ ಆಪ್ಟೆ ಅವರುಗಳು ಸಂಸದೀಯ ಮಂಡಳಿ ಸಭೆಯಲ್ಲಿ ಗೈರು ಹಾಜರಿದ್ದ ಪ್ರಮುಖರಾಗಿದ್ದಾರೆ.