ಸುಮಾರು 500 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಹಾಗೂ ಅವರ ಪತ್ನಿ ಪಂಕಜ ಕುಮಾರಿ ಸಿಂಗ್ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಾಪೂರ್ವ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾಗಿರುವ ದೂರಿನಾಧಾರದಲ್ಲಿ ಈ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಪ್ಪುಹಣವನ್ನು ಬಿಳಿಯಾಗಿಸಲು ಅಮರ್ ಸಿಂಗ್ ಕಂಪೆನಿಗಳನ್ನು ಸಂಯೋಜಿಸುತ್ತಾರೆ ಎಂಬುದಾಗಿ ಇವರ ವಿರುದ್ಧ ದೂರುನೀಡಲಾಗಿದೆ ಎಂಬುದಾಗಿ ಡಿಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಬ್ರಿಜ್ ಲಾಲ್ ವರದಿಗಾರರಿಗೆ ತಿಳಿಸಿದ್ದಾರೆ.
ಶಿವಕಾಂತ್ ತಿವಾರಿ ಎಂಬವರು ನೀಡಿರುವ ತಮ್ಮ 14 ಪುಟಗಳ ದೂರಿನಲ್ಲಿ 2003-2008ರಲ್ಲಿ ಈ ದಂಪತಿಗಳು ತಮ್ಮ ಕಂಪೆನಿಗಳನ್ನು ಸಂಯೋಜಿಸಿದ್ದು ಸುಮಾರು 500 ಕೋಟಿ ರೂಪಾಯಿ ಗಳಿಸಿದ್ದಾರೆ ಎಂದು ಹೇಳಿದ್ದಾರೆ ಎಂಬುದಾಗಿ ಕಾನ್ಪುರದ ಡಿಐಜಿ ನೀರಾ ರಾವತ್ ತಿಳಿಸಿದ್ದಾರೆ.
ಎನರ್ಜಿ ಡೆವಲಪ್‌ಮೆಂಟ್ ಕಂಪೆನಿ, ಇಡಿಸಿಎಲ್ ಪವರ್ ಲಿಮಿಟೆಡ್, ಪಂಕಜ ಆರ್ಟ್ ಆಂಡ್ ಕ್ರೆಡಿಟ್ ಲಿಮಿಟೆಡ್, ಸರ್ವೋತ್ತಮ್ ಕ್ಯಾಪ್ ಲಿಮಿಟೆಡ್, ಇಡಿಸಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಈಸ್ಟರ್ನ್ ಇಂಡಿಯಾ ಕಂಪೆನಿಗಳನ್ನು ದೂರಿನಲ್ಲಿ ಹೆಸರಿಸಲಾಗಿದ್ದು, ಇವೆಲ್ಲವನ್ನೂ ಅಮರ್ ದಂಪತಿಗಳು ನಡೆಸುತ್ತಿದ್ದಾರೆನ್ನಲಾಗಿದೆ.
ಈ ಕಂಪೆನಿಗಳೊಂದಿಗೆ ಚಿಕ್ಕಚಿಕ್ಕ ಕಂಪೆನಿಗಳನ್ನು ಸಂಯೋಜಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಉದಾಹರಣೆಗೆ 25 ಕಂಪೆನಿಗಳು ಸರ್ವೋತ್ತಮ ಕ್ಯಾಪ್ ಲಿಮಿಟೆಡ್ ಜತೆಗೆ ವಿನಿಯೋಗಿಸಲಾಗಿದೆ ಎಂದು ಎಡಿಜಿ ಹೇಳಿದ್ದಾರೆ.
ದೂರಿನಲ್ಲಿ ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರ ಹೆಸರನ್ನೂ ಸೇರಿಸಲಾಗಿದೆ. ಐಪಿಸಿಯ ಹಲವು ಸೆಕ್ಷನ್‌ಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಇವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಾಯಾವತಿ ಸಂಚು ಈ ದೂರಿಗೆ ಪ್ರತಿಕ್ರಿಯೆ ನೀಡಿರುವ ಅಮರ್ ಸಿಂಗ್ ಅವರು ಇದು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ತಮ್ಮ ವಿರುದ್ಧ ವಿನಾಕಾರಣ ದೂರು ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಹೂಡಿರುವ ಸಂಚು ಎಂಬುದಾಗಿ ಅವರು ನೇರ ಆರೋಪ ಮಾಡಿದ್ದಾರೆ.