ಹೈದರಾಬಾದ್, ಶುಕ್ರವಾರ, 16 ಅಕ್ಟೋಬರ್ 2009( 13:41 IST )
ಹೈದರಾಬಾದ್: ನಕ್ಸಲ್ ನಂಟು ಹೊಂದಿದ ಆರೋಪದ ಮೇಲೆ ಕೊಬಾಡ್ ಘಾಂಡಿಯ ಬಂಧನವಾಗಿ ಒಂದು ತಿಂಗಳು ಕಳೆದ ಬಳಿಕ, ಕೃಷಿ ವಿಜ್ಞಾನಿ ಮತ್ತು ಪತ್ನಿಯನ್ನು ಬಂಧಿಸಲಾಗಿದೆ.
ಡೆಲ್ಲಿಯ ಪುಸಾ ಸಂಸ್ಥೆಯಲ್ಲಿ ಡಾಕ್ಟರೇಟ್ ಡಿಗ್ರಿಗೆ ಕೃಷಿ ವಿಜ್ಞಾನಿ ಓದಿದ್ದರು. ಕೃಷಿ ವಿಜ್ಞಾನಿ 47 ವರ್ಷ ವಯಸ್ಸಿನ ರವಿ ಶರ್ಮಾ ಮತ್ತು ಪತ್ನಿಯಾದ 45ರ ಪ್ರಾಯದ ಬಿ. ಅನುರಾಧಾ ಪೊಲೀಸ್ ಬೆಂಗಾವಲಿನ ಮೇಲೆ ಮುತ್ತಿಗೆ ಹಾಕುವಲ್ಲಿ ತಜ್ಞರಾಗಿದ್ದು, ಇತ್ತೀಚೆಗೆ ಮಹಾರಾಷ್ಟ್ರ ಸೇರಿದಂತೆ ಬಿಹಾರ, ಜಾರ್ಖಂಡ್‌ನಲ್ಲಿ ಭೀಕರ ಹತ್ಯೆಗಳನ್ನು ನಡೆಸಿದ್ದರು.
ನಾಗರಿಕ ಸಮಾಜ ನಕ್ಸಲರ ವೈಭವೀಕರಣ ನಿಲ್ಲಿಸಬೇಕು ಅಥವಾ ಬಂಡವಾಳಶಾಹಿಯ ವಿರುದ್ಧ ಕೋಟೆಯೆಂದು ಕಾಣದೇ, ಹಿಂಸಾಚಾರದ ಅಗಾಧತೆಯ ಹಿನ್ನೆಲೆಯಲ್ಲಿ ಅವರನ್ನು ಅಳೆಯಬೇಕು ಎಂದು ಗೃಹಸಚಿವ ಚಿದಂಬರಂ ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿ ಈ ಬಂಧನಗಳು ನಡೆದಿವೆ.ಶರ್ಮಾ ಪ್ರಮುಖ ಮಾವೋವಾದಿ ನಾಯಕನಾಗಿದ್ದು, ಅಮರ್, ಆನಂದ್, ಮಹೇಶ್ ಮುಂತಾದ ನಕಲಿ ಹೆಸರುಗಳ ಮೂಲಕ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ.
ಆಂಧ್ರಪ್ರದೇಶ ಪೊಲೀಸ್ ತಂಡವು ಅ.10ರಂದು ಬಂಧಿಸಿದ್ದರೂ ಪಾಟ್ನಾ ಜಂಕ್ಷನ್ ಬಳಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ. 3 ದಿನಗಳ ಬಳಿಕ, ಅನುರಾಧಾ ಜತೆ ಜಾರ್ಖಂಡ್ ಪೊಲೀಸರಿಗೆ ಪುನಃ ಸಿಕ್ಕಿಬಿದ್ದ. ಬುಧವಾರ ದಂಪತಿಯನ್ನು ಜೈಲಿಗೆ ಕಳಿಸಲಾಗಿದ್ದು, ಲ್ಯಾಪ್‌ಟಾಪ್ ಮತ್ತು ಅನೇಕ ಸಿಡಿಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.ಶರ್ಮಾ ಬಂಧನದಿಂದ ಮಾವೋವಾದಿಗಳ ಚಟುವಟಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ.
ಶರ್ಮಾ ಮತ್ತು ಅನುರಾಧಾ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ 2001ರಿಂದ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಈ ರಾಜ್ಯಗಳಲ್ಲಿ ಪ್ರವಾಸ ಮಾಡಿದ ದಂಪತಿಗೆ ಈ ಪ್ರದೇಶಗಳು ಚಿರಪರಿಚಿತವಾಗಿತ್ತು. ಕೃಷಿ ಶಿಕ್ಷಣದ ಯುವವಿದ್ಯಾರ್ಥಿಯಾಗಿದ್ದಾಗ ಶರ್ಮ ಪ್ರಯೋಗಶಾಲೆಯ ಸಂಶೋಧನೆಯನ್ನು ರೈತರ ಜಮೀನುಗಳಲ್ಲಿ ಪ್ರಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಮಾವೋವಾದಿಗಳ ಪ್ರಭಾವಕ್ಕೆ ಒಳಗಾಗಿದ್ದ. ಸ್ವಗ್ರಾಮದಲ್ಲಿ ಜಮೀನ್ದಾರಿಗಳ ಶೋಷಣೆ ವಿರುದ್ಧ ಸಿಡಿದೆದ್ದ ರ‌್ಯಾಲಿಯಲ್ಲಿ ಭಾಗವಹಿಸಿದ್ದ ಶರ್ಮನನ್ನು ಮೆಹಬೂಬನಗರ ಪೊಲೀಸರು 1985ರಲ್ಲಿ ಮೊದಲ ಬಾರಿಗೆ ಬಂಧಿಸಿದ್ದರು.
ಆಗ ಮಾವೋವಾದಿಗಳಿಗೆ ಅವನ ಬೆಂಬಲ ಸೈದ್ಧಾಂತಿಕವಾಗಿತ್ತು. ಬಳಿಕ ಹೈದರಾಬಾದ್ ಕೃಷಿ ವಿವಿಗೆ ಸೇರಿದ ಬಳಿಕ ಅವನು ಶಸ್ತ್ರಸಜ್ಜಿತ ಹೋರಾಟಕ್ಕೆ ಆಕರ್ಷಿತನಾಗಿದ್ದ, ಪಿಡಬ್ಲ್ಯುಜಿಗೆ ಸೇರಿದ ಶರ್ಮಾ ನೆಲಬಾಂಬ್ ಸ್ಫೋಟ ಮತ್ತು ನಲಗೊಂಡಾ, ವಾರಂಗಲ್ ಮತ್ತು ಕಮ್ಮಮ್ ಜಿಲ್ಲೆಗಳ ಅಧಿಕಾರಿಗಳ ಮೇಲೆ ದಾಳಿಗಳನ್ನು ನಡೆಸಿದ್ದ.