ಕಳೆದ ವರ್ಷ ಈ ಮಾರಣಾಂತಿಕ ದಾಳಿ ನಡೆಸಿರುವ ಇಸ್ಲಾಮಿ ಸಂಘಟನೆಗಳ ಮೇಲೆ ಕಡಿವಾಣ ಹೇರುಲು ಪಾಕಿಸ್ತಾನವು ವಿಫಲವಾಗಿರುವ ಕಾರಣ ಭಾರತವು ಮುಂಬೈ ದಾಳಿಯಂತಹ ದಾಳಿಗೀಡಾಗುವ ಭಯದಿಂದ ಹೊರತಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಮುಂಬೈ ದಾಳಿಯ ದುರ್ಘಟನೆ ಸಂಭವಿಸಿ ಒಂದು ವರ್ಷಗಳು ಸಂದುತ್ತಿರುವ ವೇಳೆಗೆ, ಮತ್ತೆ ಅಂತಹುದೇ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂಬ ಅಂತಾರಾಷ್ಟ್ರೀಯ ವರದಿಗಳಿಗೆ ಪ್ರತಿಕ್ರಿಯಿಸಿರುವ ಚಿದಂಬರಂ ಅವರು, ಮತ್ತೆ ಇಂತಹ ದಾಳಿಗಳು ನಡೆದುದೇ ಆದರೆ ಅದಕ್ಕೆ 'ಕ್ಷಿಪ್ರ ಹಾಗೂ ನಿರ್ಣಾಯಕ' ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳ 11ನೆ ತಾರಿಕಿನಂದು ಪಾಕಿಸ್ತಾನದಿಂದ ಆಗಮಿಸಿದ್ದ 10 ಬಂದೂಕುಧಾರಿಗಳು ಎರಡು ಹೊಟೇಲುಗಳು ಮತ್ತು ಒಂದು ಯಹೂದಿ ಕೇಂದ್ರ, ಆಸ್ಪತ್ರೆ, ರೈಲ್ವೇ ನಿಲ್ದಾಣಗಳಲ್ಲಿ ದಾಳಿ ನಡೆಸಿ 166 ಮಂದಿಯನ್ನು ಕೊಂದು ಹಾಕಿದ್ದರು. ಇದಕ್ಕೆ ಪಾಕಿಸ್ತಾನಿ ಪ್ರಜೆಗಳು ಕಾರಣ ಎಂದು ಭಾರತವು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಅಣ್ವಸ್ತ್ರಶಕ್ತವಾಗಿರುವ ಈ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಮೂಡಿದೆ.
ಸಂದರ್ಶನ ಒಂದರಲ್ಲಿ ಮಾತನಾಡುತ್ತಿದ್ದ ಅವರು, ಭಯೋತ್ಪಾದನಾ ಭೀತಿಯನ್ನು ಎದುರಿಸುವ ನಮ್ಮ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಿದೆ ಎಂದು ಹೇಳಿದರಲ್ಲದೆ, ಭಾರತವು ಈಗ ಪಾಠ ಕಲಿತಿದೆ ಎಂದಿದ್ದಾರೆ. ಹೊಸ ಭದ್ರತಾ ಕ್ರಮಗಳಿಗಾಗಿ ಭಾರತವು ಮಿಲಿಯಗಟ್ಟಲೆ ವ್ಯಯಿಸುತ್ತಿದ್ದು, ಪ್ರಮುಖ ನಗರಗಳಲ್ಲಿ ಕಮಾಂಡೋ ಹಬ್‌ಗಳಿಂದ ಹಿಡಿದು ನೌಕಾ ಗಸ್ತು ಹಾಗೂ ಸುಧಾರಿತ ಗುಪ್ತಚರ ಮಾಹಿತಿ ಸಂಗ್ರಹ ಮುಂತಾದ ಕ್ರಮಗಳನ್ನು ಅಳವಡಿಸಿಕೊಂಡಿದೆ.
ಕಳೆದ ವರ್ಷದ ದಾಳಿನಡೆಸಿದ ವೇಳೆ ಯುಪಿಎ ಸರ್ಕಾರದ ವಿರುದ್ಧ ವ್ಯಕ್ತವಾದ ವ್ಯಾಪಕ ಟೀಕೆಗಳ ಹಿನ್ನೆಲೆಯಲ್ಲಿ ಆಗ ಗೃಹಸಚಿವರಾಗಿದ್ದ ಶಿವರಾಜ್ ಪಾಟೀಲ್ ಅವರ ಸ್ಥಾನಕ್ಕೆ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಅವರನ್ನು ನೇಮಿಸಲಾಗಿತ್ತು.