ಭಾರತದ ವಾಯು ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಅಮೆರಿಕಾ ವಿಮಾನವೊಂದನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ. ಇದರಲ್ಲಿ ಅಮೆರಿಕಾದ 205 ನೌಕಾ ಕಮಾಂಡೋಗಳಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯುಎಇಯ ಫುಜಿರಿಯಾದಿಂದ ಬ್ಯಾಂಕಾಕ್‌ಗೆ (ಥಾಯ್ಲೆಂಡ್) ತೆರಳುತ್ತಿದ್ದ ಈ ವಿಮಾನವು ನಾಗರಿಕ ವಿಮಾನದ ಸಂಕೇತಗಳನ್ನು ನೀಡುತ್ತಿತ್ತು. ಆದರೆ ಅದರ ವರ್ತನೆ ಸಂಶಯಾತೀತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
205 ಅಮೆರಿಕಾ ನೌಕಾ ದಳದ ಕಮಾಂಡೋಗಳನ್ನು ಸಾಗಿಸುತ್ತಿದ್ದ ಬೋಯಿಂಗ್ 767 ವಿಮಾನವನ್ನು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಂತೆ ಭಾರತೀಯ ವಾಯು ಪಡೆಯು (ಐಎಎಫ್) ಆದೇಶ ನೀಡಿತ್ತು. ಅದರಂತೆ ವಿಮಾನವು ಭಾನುವಾರ ಬೆಳಿಗ್ಗೆ 7.52ಕ್ಕೆ ಭೂಸ್ಪರ್ಶ ಮಾಡಿದೆ. ಇದೀಗ ವಿಚಾರಣೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಸಂಶಯಾತೀತವಾಗಿ ಭಾರತೀಯ ವಾಯುಪ್ರದೇಶದಲ್ಲಿ ಹಾರಾಡುತ್ತಿದ್ದ ವಿಮಾನದ ಬಗ್ಗೆ ಮುಂಬೈ ವೈಮಾನಿಕ ನಿಯಂತ್ರಣ ದಳವು (ಎಟಿಸಿ) ಭಾರತೀಯ ವಾಯುಪಡೆಗೆ ಮಾಹಿತಿ ನೀಡಿತ್ತು.
ಭಾರತೀಯ ವಾಯುಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ದಳ ಮತ್ತು ಮುಂಬೈ ಸುಂಕಾಧಿಕಾರಿಗಳು ಅಮೆರಿಕಾದ ಆಗಂತುಕ ವಿಮಾನದ ಪೈಲಟ್‌ನ್ನು ವಿಚಾರಣೆ ನಡೆಸುತ್ತಿದ್ದಾರೆ.
ಥಾಯ್ಲೆಂಡ್‌ಗೆ ಪ್ರಯಾಣ ಬೆಳೆಸಬೇಕಿರುವ ಈ ವಿಮಾನವನ್ನೀಗ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಅಂಚೊಂದರಲ್ಲಿ ನಿಲ್ಲಿಸಲಾಗಿದ್ದು, ಭಾರತೀಯ ಭದ್ರತಾ ಪಡೆಗಳು ವಿಮಾನವನ್ನು ಸುತ್ತುವರಿದಿವೆ. ಪ್ರಯಾಣಿಕರನ್ನು ವಿಮಾನದಿಂದ ಕೆಳಕ್ಕಿಳಿಯಲು ಅವಕಾಶ ನೀಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಅಮೆರಿಕಾದ ಅಧಿಕಾರಿಗಳೀಗ ಭಾರತೀಯ ವಾಯು ಪಡೆಯೊಂದಿಗೆ ಸಂಪರ್ಕ ಸಾಧಿಸಿದ್ದು, ವಿಮಾನವನ್ನು ಬಿಡುಗಡೆ ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
ಇತ್ತೀಚಿನ ಮಾಹಿತಿ.. ಇತ್ತೀಚಿನ ಮಾಹಿತಿಗಳ ಪ್ರಕಾರ ಭಾರತೀಯ ವಾಯು ಪಡೆಯು ವಶಕ್ಕೆ ಪಡೆದುಕೊಂಡಿದ್ದ ಅಮೆರಿಕಾ ವಿಮಾನದ ಪ್ರಯಾಣ ಮುಂದುವರಿಕೆಗೆ ಅನುಮತಿ ನೀಡಿದೆ. ಆದರೆ ಎಷ್ಟು ಹೊತ್ತಿಗೆ ಮತ್ತು ಯಾವಾಗ ಹೊರಡಬೇಕು ಎಂಬುದನ್ನು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ ನಿರ್ಧರಿಸಬೇಕು ಎಂದು ತಿಳಿಸಿದೆ.