ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಂಕಾ ತಮಿಳರ ಪುನರ್ವಸತಿಗೆ ಮತ್ತಷ್ಟು ಸಹಾಯ: ಭಾರತ (India | Sri Lanka | Tamil | Karunanidhi)
Feedback Print Bookmark and Share
 
ಎಲ್‌ಟಿಟಿಇ ವಿರುದ್ಧದ ಯುದ್ಧದ ನಂತರ ನಿರಾಶ್ರಿತರಾಗಿರುವ ಶ್ರೀಲಂಕಾ ತಮಿಳರ ಪುನರ್ವಸತಿಗಾಗಿ ಭಾರತ ಸರಕಾರವು ಈಗಾಗಲೇ 500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಹಣ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಭಾನುವಾರ ತಿಳಿಸಿದ್ದಾರೆ.

ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಅವರು, ಶ್ರೀಲಂಕಾ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟಿಸಿದರು.

ಯುದ್ಧದಿಂದ 2.5 ಲಕ್ಷ ತಮಿಳರು ನಿರಾಶ್ರಿತರಾಗಿದ್ದು, ಅವರ ಪುನರ್ನೆಲೆಸುವಿಕೆ ಕುರಿತು ಕರುಣಾನಿಧಿ ಜತೆ ಸಮಾಲೋಚನೆ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.

'ಕೇಂದ್ರವು ಈಗಾಗಲೇ 500 ಕೋಟಿ ರೂಪಾಯಿಗಳನ್ನು ತಮಿಳರ ಪುನರ್ವಸತಿಗೆಂದು ನೀಡಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಧನ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ' ಎಂದು ಚಿದಂಬರಂ ವಿವರಣೆ ನೀಡಿದ್ದಾರೆ.

ಕಳೆದ ವಾರ ಶ್ರೀಲಂಕಾಕ್ಕೆ ತೆರಳಿ ಅಲ್ಲಿನ ತಮಿಳರ ಜೀವನ ಸ್ಥಿತಿ-ಗತಿಯನ್ನು ಕಂಡು ಬಂದ 10 ಸಂಸದರ ಭೇಟಿಯ ಕುರಿತು ನಮ್ಮ ಮಾತುಕತೆ ಕೇಂದ್ರಿತವಾಗಿತ್ತು ಎಂದೂ ಚಿದಂಬರಂ ತಿಳಿಸಿದರು.

ತಮಿಳರ ಪುನರ್ವಸತಿಯನ್ನು ಈಗಾಗಲೇ ಆರಂಭಿಸಲಾಗಿದ್ದು, ಎಲ್ಲವನ್ನೂ ಸುಸೂತ್ರವಾಗಿ ಕೈಗೊಳ್ಳಲಾಗುತ್ತದೆ ಎಂದು ಭಾರತದಿಂದ ತೆರಳಿದ್ದ ಸಂಸದರ ನಿಯೋಗಕ್ಕೆ ಕೊಲೊಂಬೊ ಭರವಸೆ ನೀಡಿದೆ. ಈಗಾಗಲೇ 5,000 ಮಂದಿಯನ್ನು ಸಂಸದರು ಹೋದ ನಂತರ ತಮ್ಮ ಮೂಲ ಸ್ಥಳಗಳಿಗೆ ಕಳುಹಿಸಲಾಗಿದೆ. ಉಳಿದ ತಮಿಳರಿಗೆ ಕೂಡ ಶೀಘ್ರದಲ್ಲೇ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಶ್ರೀಲಂಕಾ ತಿಳಿಸಿದೆ ಎಂದು ಚಿದಂಬರಂ ನುಡಿದರು.

ಮಾತುಕತೆಯ ಸಂದರ್ಭದಲ್ಲಿ ಕರುಣಾನಿಧಿಯವರು ನೀಡಿರುವ ಸಲಹೆಗಳನ್ನು ಸಂಪುಟ ಸಭೆಯ ಸಂದರ್ಭಗಳಲ್ಲಿ ಚರ್ಚಿಸಲಾಗುತ್ತದೆ ಎಂಬ ಸುಳಿವನ್ನು ಸಚಿವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ