ಮಡಂಗಾವ್ ಸ್ಫೋಟದ ಹಿಂದೆ ಸನಾತನ ಸಂಸ್ಥೆ ಕೈವಾಡವಿರುವ ಕುರಿತು ಯಾವುದೇ ಪ್ರಬಲ ಸಾಕ್ಷ್ಯಗಳನ್ನು ಹೊಂದಿರದ ಹೊರತಾಗಿಯೂ ಹಿಂದೂ ಸಂಘಟನೆ ಮೇಲೆ ನಿಷೇಧ ಹೇರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಗೋವಾ ಸರಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಪ್ರಿಂಟಿಂಗ್ ಪ್ರೆಸ್ ಮತ್ತು ಆಶ್ರಮದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪ್ರಕರಣದಲ್ಲಿ ಜಾಣತನ ಕೆಲಸ ಮಾಡಿರುವುದರಿಂದ ಯಾವುದೇ ಪ್ರಬಲ ಸಾಕ್ಷ್ಯ ನಮಗೆ ಇದುವರೆಗೂ ಲಭ್ಯವಾಗಿಲ್ಲ ಎಂದು ದಕ್ಷಿಣ ಗೋವಾ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಸರಕಾರವು ಪ್ರಮುಖ ಸಾಕ್ಷ್ಯಗಳನ್ನು ಹೊಂದಿಲ್ಲ ಎಂಬುದು ಖಾತರಿಯಾಗಿದೆ.
ಅದೇ ಹೊತ್ತಿಗೆ ಮುಖ್ಯಮಂತ್ರಿ ದಿಗಂಬರ ಕಾಮತ್ ಸಂಘಟನೆಯ ಕುರಿತು ಯಾವುದೇ ಹೇಳಿಕೆ ನೀಡಿ ವಿವಾದಕ್ಕೊಳಗಾಗುವ ಪ್ರಸಂಗಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಆರೋಪಿತ ಹಿಂದೂ ಸಂಘಟನೆಯನ್ನು ನಿಷೇಧ ಮಾಡಲಾಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, 'ಸನಾತನ ಸಂಸ್ಥೆಯನ್ನು ನಾವು ಹೇಗೆ ನಿಷೇಧ ಮಾಡಲು ಸಾಧ್ಯ? ಪೊಲೀಸರು ತಮ್ಮ ತನಿಖೆಗಳನ್ನು ಪೂರ್ಣಗೊಳಿಸಲಿ. ನಾವು ಈಗ ನಿಷೇಧ ಹೇರಿದಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಬಹುದು' ಎಂದು ಆಂಗ್ಲ ಪತ್ರಿಕೆಯೊಂದರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಅದರೆ ಇದೇ ಪ್ರಶ್ನೆಯನ್ನು ಸರಕಾರಿ ವಕೀಲ ಸುಬೋಧ್ ಕಂಟಕ್ ಎದುರಿಟ್ಟಾಗ ಸರಕಾರವು ಸನಾತನ ಸಂಸ್ಥೆಯ ನಿಷೇಧಕ್ಕೆ ಯೋಚಿಸಿರುವುದನ್ನು ಬಹಿರಂಗಪಡಿಸಿದ್ದಾರೆ.
'ಸನಾತನ ಸಂಸ್ಥೆಯನ್ನು ನಿಷೇಧ ಮಾಡುವ ಅವಕಾಶಗಳಿವೆಯೇ ಎಂದು ಪರಿಶೀಲಿಸಿ ಎಂದು ಮುಖ್ಯಮಂತ್ರಿಯವರು ನನಗೆ ಹೇಳಿದ್ದಾರೆ. ನಾವು ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇವೆ' ಎಂದು ಕಂಟಕ್ ತಿಳಿಸಿದ್ದಾರೆ.
ಈ ಹಿಂದೆ ರಾಜ್ಯ ಗೃಹ ಸಚಿವ ರವಿ ನಾಯ್ಕ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಸರಕಾರದ ನಿಲುವನ್ನು ಸ್ಪಷ್ಟಪಡಿಸಿದ್ದ ಅವರು, ಪೊಲೀಸರು ತನಿಖೆ ಪೂರ್ಣಗೊಳಿಸಿದ ನಂತರ ಸಂಘಟನೆಯನ್ನು ನಿಷೇಧ ಮಾಡುವ ಕುರಿತು ಯೋಚಿಸಲಾಗುತ್ತದೆ ಎಂದಿದ್ದರು.
ಸಂಘಟನೆ ಮೇಲೆ ನಿಷೇಧ ಹೇರಲು ಗೋವಾ ಪೊಲೀಸ್ ಇಲಾಖೆ ಬಯಸುತ್ತಿದೆಯೇ ಎಂದು ಪ್ರಶ್ನಿಸಿದಾಗ ಉಪ ಪೊಲೀಸ್ ಆಯುಕ್ತ ಆರ್.ಎಸ್. ಯಾದವ್, 'ನಾವು ನಮ್ಮ ತನಿಖಾ ವರದಿಯನ್ನು ಸರಕಾರಕ್ಕೆ ನೀಡಲಿದ್ದೇವೆ. ಮುಂದಿನ ವಿಚಾರ ಗೃಹ ಇಲಾಖೆಗೆ ಬಿಟ್ಟದ್ದು' ಎಂದಿದ್ದಾರೆ.