ಎರಡು ವರ್ಷಗಳ ಹಿಂದೆ ಅಪ್ಪಟ ಭಾರತೀಯ ನಾರಿಯಂತೆ ಸೀರೆ-ಬಳೆ ತೊಟ್ಟು, ಹಣೆಯಲ್ಲಿ ಕಡುಗೆಂಪು ಬಿಂದಿಯಿಟ್ಟು ಬೋರ್‌ವೆಲ್‌ನಿಂದ ನೀರು ತರಲು ಹೋಗಿದ್ದಾಗ ಅಚ್ಚರಿಗಣ್ಣುಗಳಿಂದ ನೋಡಿದ್ದ ಗ್ರಾಮಸ್ಥರೂ ಈಗ ಸುಮ್ಮನಿದ್ದಾರೆ. ಯಾಕೆಂದರೆ ಆ ಸಲಿಂಗಿ ದಂಪತಿಗಳಿಬ್ಬರೂ ಎಲ್ಲಾ ಗಂಡ-ಹೆಂಡತಿಯರಂತೆ ಸುಖ ಸಂಸಾರ ಸಾಗಿಸುತ್ತಿದ್ದಾರೆ.
WD
ಗಂಡು-ಹೆಣ್ಣು ಸಂಸಾರದಲ್ಲಿ ನಿರ್ವಹಿಸುವ ಕಾರ್ಯಗಳನ್ನು ನಾವೂ ಅಚ್ಚುಕಟ್ಟಾಗಿ ಮಾಡುತ್ತೇವೆ. ನಮ್ಮ ನಡುವೆ ಅತ್ಯುತ್ತಮ ಅನ್ಯೋನ್ಯತೆಯಿದೆ. ಹಾಗಾಗಿ ಹೆತ್ತವರಿಂದಲೂ ಆಕ್ಷೇಪ ಬಂದಿಲ್ಲ ಎನ್ನುತ್ತಾರೆ ಈ ಒರಿಸ್ಸಾದ ಸಲಿಂಗಿ ದಂಪತಿಗಳು.
ಇಲ್ಲಿ ಒರಿಸ್ಸಾದ ಕೊರಾಪುತ್ ಜಿಲ್ಲೆಯ ಗುಡಾ ಗ್ರಾಮದ ಪಿತಾಂಬರ್ ನಾಯಕ್ ಹೆಂಡತಿಯಾದರೆ, ಪಕ್ಕದ ಬಘರಾಗುಡ ಗ್ರಾಮದ ಶ್ಯಾಮ್ ಮಾಝಿ ಗಂಡ.
ಶ್ಯಾಮ್‌ನ ಶ್ರೇಷ್ಠ ಕೊಳಲು ವಾದನ ಕಲೆಯಿಂದ ಪ್ರಭಾವಿತನಾದ ನನಗೆ ಆತನೊಂದಿಗೆ ಪ್ರೇಮಾಂಕುರವಾಯಿತು ಎಂದು ಹೆಂಡತಿ ಪೀತಾಂಬರ ಹೇಳಿಕೊಂಡಿದ್ದಾನೆ.
ಹೀಗೆ ಪ್ರೇಮಿಗಳಾದ ಕೆಲವಾರು ತಿಂಗಳುಗಳ ಕಾಲ ಅವರಿಬ್ಬರೂ ಡೇಟಿಂಗ್ ಮಾಡಿದ ಬಳಿಕ ಮದುವೆ ತೀರ್ಮಾನಕ್ಕೆ ಬಂದರಂತೆ. 'ಇದು ಮಾನವ ಹಸ್ತಕ್ಷೇಪವಿಲ್ಲದೆ ನಡೆದ ದೈವಿಕ ಕಾರ್ಯ' ಎಂದು ಪಿತಾಂಬರ ಹೇಳುತ್ತಾನೆ.
ಈ ಕುರಿತು ಮತ್ತಷ್ಟು ವಿವರಣೆ ನೀಡುವ ಆತ, 'ಒಂದು ದಿನ ಕನಸಿನಲ್ಲಿ ಗ್ರಾಮ ದೇವತೆ ನನ್ನ ಕನಸಿನಲ್ಲಿ ಬಂದು, ಶ್ಯಾಮ್‌ನನ್ನು ಮದುವೆಯಾಗುವಂತೆ ಹರಸಿದಳು. ನಂತರ ನಾನು ಶ್ಯಾಮ್‌ನಲ್ಲಿ ನನಗೆ ಬಿದ್ದ ಕನಸನ್ನು ವಿವರಿಸಿದಾಗ, ಆತ ಮದುವೆಯಾಗಲು ಒಪ್ಪಿಕೊಂಡ' ಎನ್ನುತ್ತಾನೆ.
ನಾನು ಹೆಂಡತಿಯಂತೆ ಇರಲು ದೇವತೆ ನನಗೆ ಆಶೀರ್ವಾದ ಮಾಡಿದಳು. ಶ್ಯಾಮ್‌ನ ಹೆಂಡತಿಯಾಗಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಎಲ್ಲಾ ಹೆಂಡತಿಯರು ಮಾಡುವ ಕಾರ್ಯಗಳನ್ನು ನಾನೂ ಮಾಡುತ್ತೇನೆ. ದೇವತೆಯ ಹರಕೆಯನ್ನು ನಾನು ಶಿರಸಾ ಪಾಲಿಸುತ್ತಿದ್ದೇನೆ ಎಂದಿದ್ದಾನೆ ಪೀತಾಂಬರ.
ಮದುವೆಯೆನ್ನುವುದು ಎರಡು ಹೃದಯಗಳ ನಡುವಿನ ಒಪ್ಪಂದ. ಸಂಗಾತಿಯ ಜತೆ ಸಂತೋಷದಿಂದ ಇರುವಾಗ ಎಲ್ಲರೂ ಅದನ್ನು ಪರಿಪೂರ್ಣ ಮದುವೆ ಎನ್ನುತ್ತಾರೆ. ಇದನ್ನು ವಿರೋಧಿಸಬಹುದಾದ ನನ್ನ ಕುಟುಂಬದ ಸದಸ್ಯರು ಅಥವಾ ಸಮಾಜಕ್ಕೆ ಈ ಕುರಿತು ನಾನು ವಿವರಣೆ ನೀಡಿದ್ದೆ. ಈ ಮದುವೆಯಿಂದ ನಾನು ಆನಂದದಿಂದಿದ್ದೇನೆ ಎಂದು ಗೃಹರಕ್ಷಕ ದಳದ ಸದಸ್ಯನಾಗಿರುವ ಶ್ಯಾಮ್ ತಿಳಿಸಿದ್ದಾನೆ.
ಇವರ ದಾಂಪತ್ಯಕ್ಕೆ ಶ್ಯಾಮ್ ತಾಯಿ ಭುಗರಾ ಬೆಂಬಲ ವ್ಯಕ್ತಪಡಿಸುತ್ತಾ, 'ನನ್ನ ಮಗ ಯಾರನ್ನಾದರೂ ಮದುವೆಯಾಗಿ ಸಂತೋಷದಿಂದಿರುವುದಾದರೆ ನಾನು ಯಾಕೆ ಅದನ್ನು ವಿರೋಧಿಸಲಿ?' ಎಂದು ಪ್ರಶ್ನಿಸುತ್ತಾರೆ.
ಕಳೆದ ವಾರವಷ್ಟೇ ಈ ಸಲಿಂಗಿ ದಂಪತಿಗಳು ತಮ್ಮ ಎರಡನೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮದುವೆಯಲ್ಲಿ ನಡೆಯುವ ಧಾರ್ಮಿಕ ಕಟ್ಟಳೆಗಳನ್ನು ನಡೆಸಲಾಯಿತು. ಮೊದಲ ವಾರ್ಷಿಕೋತ್ಸವವನ್ನೂ ಇದೇ ರೀತಿ ಆಚರಿಸಿಕೊಳ್ಳಲಾಗಿತ್ತಂತೆ.
'ಅವರು ಸಂತೋಷದಿಂದಿದ್ದಾರೆ. ಹಾಗಾಗಿ ಗ್ರಾಮದ ಇತರರು ಅದನ್ನು ವಿವಾದವನ್ನಾಗಿ ಮಾಡುವ ಅಗತ್ಯವೇನಿದೆ?' ಎಂದು ಈ ಗ್ರಾಮದ ಬೇನು ಮಾಝಿ ಎಂಬವರು ಪ್ರಶ್ನಿಸುತ್ತಾರೆ.