ಭಾರತದ ಯಶಸ್ವೀ ಚಂದ್ರಯಾನ-1ದಲ್ಲಿ ಬಳಸಲಾಗಿದ್ದ ಅಮೆರಿಕಾದ ವೈಜ್ಞಾನಿಕ ಪರಿಕರದ ಹಿಂದೆ ಕೆಲಸ ಮಾಡಿದ್ದ ನಾಸಾ ವಿಜ್ಞಾನಿಯೊಬ್ಬರನ್ನು ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆಪಾದನೆ ಮೇಲೆ ಅಮೆರಿಕಾ ಬಂಧಿಸಿದೆ.
52ರ ಹರೆಯದ ಸ್ಟೀವಾರ್ಡ್ ಡೇವಿಡ್ ನೋಜೆಟ್ ಎಂಬ ವಿಜ್ಞಾನಿಯ ಮೇಲೆ ಸೋಮವಾರ ಅಮೆರಿಕಾದ ಫೆಡರಲ್ ತನಿಖಾ ಸಂಸ್ಥೆ ಬೇಹುಗಾರಿಕೆಗೆ ಯತ್ನಿಸಿದ ಕುರಿತ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
PR
ಅಮೆರಿಕಾ ಚಂದ್ರಯಾನ ಕಕ್ಷೆ ಪರಿಶೀಲಕದಲ್ಲಿನ ಪ್ರಮುಖ ಪರಿಶೀಲನೆಗಾರ ಮತ್ತು ಚಂದ್ರಯಾನದಲ್ಲಿನ ಮಿನಿ-ಎಸ್ಎಆರ್‌ನಲ್ಲಿ ಸಹ-ಸಂಶೋಧಕರಾಗಿ ವಿಜ್ಞಾನಿ ಡೇವಿಡ್ ಕೆಲಸ ಮಾಡುತ್ತಿದ್ದರು ಎಂದು ಅಮೆರಿಕಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾದ ಮಿನಿ-ಆರ್ಎಫ್ ಪ್ರೊಜೆಕ್ಟ್ ಪೇಜ್‌ನಲ್ಲಿ ವಿವರಣೆ ನೀಡಲಾಗಿದೆ.
ಅಲ್ಲದೆ ಡೇವಿಡ್ ತಾಜ್ ಮಹಲ್ ಮುಂದುಗಡೆ ನಿಂತು ತೆಗೆಸಿರುವ ಫೋಟೋವನ್ನು ನಾಸಾ ಈ ಪುಟದಲ್ಲಿ ಪ್ರಕಟಿಸಿದೆ.
ಭಾರತವು ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-1ನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡ್ಡಯನ ನಡೆಸುವ ಮೊದಲು 2008ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಮಾಧ್ಯಮಗಳು ಡೇವಿಡ್‌ರ ಸಂದರ್ಶನವನ್ನು ಪ್ರಕಟಿಸಿದ್ದವು.
ಅವರನ್ನು ಇದೀಗ ಇಸ್ರೇಲ್ ಪರ ಬೇಹುಗಾರಿಕೆ ನಡೆಸಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಡೇವಿಡ್ ಇಸ್ರೇಲಿ ಬೇಹುಗಾರಿಕಾ ಅಧಿಕಾರಿಯೆಂದು ಶಂಕಿಸಲಾಗಿದ್ದು, ಅಗತ್ಯ ಮಾಹಿತಿಗಳನ್ನು ಇಸ್ರೇಲ್‌ನ ಅಧಿಕಾರಿಯೊಬ್ಬರಿಗೆ ಹಸ್ತಾಂತರಿಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಯನ್ನು ಮಂಗಳವಾರ ವಾಷಿಂಗ್ಟನ್‌ನ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿದ್ದು, ಅವರು ಜೀವಾವಧಿ ಶಿಕ್ಷೆ ಭೀತಿ ಎದುರಿಸುತ್ತಿದ್ದಾರೆ.