ಐಐಟಿ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಯಿಂದ ಹಿಂದಕ್ಕೆ ಸರಿದಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್, ತಾನು ಹಾಗೆ ಹೇಳಿಯೇ ಇಲ್ಲ; ಮಾಧ್ಯಮಗಳು ವರದಿಯನ್ನು ತಿರುಚಿವೆ ಎಂದು ಆರೋಪಿಸಿದ್ದಾರೆ.
ಐಐಟಿ ಪ್ರವೇಶ ಪರೀಕ್ಷೆಗೆ ಹಾಜರಾಗಲು 12ನೇ ತರಗತಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರುವ ಬಗ್ಗೆ ಸರಕಾರ ಯೋಚಿಸುತ್ತಿದೆ ಎಂದು ಸಿಬಲ್ ಹೇಳಿದ್ದರೆಂದು ಮಾಧ್ಯಮಗಳು ವರದಿ ಮಾಡಿದ್ದವು.
ಈ ಸಂಬಂಧ ಐಐಟಿ ನಿರ್ದೇಶಕರುಗಳ ಸಮಿತಿಯೊಂದನ್ನು ರಚಿಸಿದ್ದ ಸಿಬಲ್, 12ನೇ ತರಗತಿಯನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸಬೇಕು ಮತ್ತು ಐಐಟಿ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರಗಳಿಗೆ ಕಡಿವಾಣ ಹಾಕಬೇಕೆನ್ನುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಸರಕಾರ ಮುಂದಾಗಿದೆ ಎಂದಿದ್ದರು.
ಆದರೆ ಇದೀಗ ಸಿಬಲ್ ತನ್ನ ಹೇಳಿಕೆಯನ್ನು ಬದಲಾಯಿಸಿದ್ದು, ಐಐಟಿ ಪ್ರವೇಶ ಪರೀಕ್ಷೆಗಾಗಿನ ಅರ್ಹತೆಯನ್ನು ಸರಕಾರ ನಿರ್ಧರಿಸುವುದಿಲ್ಲ. ಅದನ್ನು ಸಂಬಂಧಪಟ್ಟ ಸಮಿತಿ ನಿರ್ಧರಿಸುತ್ತದೆ. ಮಾಧ್ಯಮಗಳು ತಪ್ಪು ವರದಿ ಮಾಡಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
'ಐಐಟಿ ಪ್ರವೇಶ ಪರೀಕ್ಷೆಗಾಗಿನ ಅರ್ಹತೆ ವಿಚಾರದಲ್ಲಿ ಭಾರತ ಸರಕಾರವು ಏನೂ ಮಾಡಲಾಗದು. ಐಐಟಿ-ಜೀಗಾಗಿ 12ನೇ ತರಗತಿಯಲ್ಲಿಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವುದು ಇನ್ನು ಮುಂದೆ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರುವ ಬಗೆಗಿನ ಪ್ರಸ್ತಾಪದ ವರದಿಗಳು ಆಧಾರರಹಿತ' ಎಂದು ಸಿಬಲ್ ತಿಳಿಸಿದ್ದಾರೆ.
ಈ ಸಂಬಂಧ ನಿರ್ಧಾರ ಕೈಗೊಳ್ಳಲು ಐಐಟಿ ಸಮಿತಿಗಷ್ಟೇ ಅಧಿಕಾರವಿದೆ. 2010ರ ಜನವರಿಯಲ್ಲಿ ಐಐಟಿ ಸಮಿತಿಯು ಪ್ರವೇಶ ಪರೀಕ್ಷೆ ಕುರಿತ ನಿಯಮಾವಳಿಗಳ ಕುರಿತ ಪರಿಷ್ಕರಣೆಯ ವರದಿಯನ್ನು ನೀಡಲಿದೆ. ಅರ್ಹತಾ ನಿಯಮಾವಳಿಗಳನ್ನು ನಿರ್ಧರಿಸುವುದು ಸಂಪೂರ್ಣ ಐಐಟಿಗೆ ಬಿಟ್ಟದ್ದು ಎಂದು ಸಿಬಲ್ ಹೇಳಿದರು.
ಐಐಟಿ ಪ್ರವೇಶ ಪರೀಕ್ಷೆ ಕುರಿತ ಅರ್ಹತೆಯನ್ನು ನಿಗದಿಪಡಿಸುವ ಅಥವಾ ಯಾವುದೇ ಪ್ರಸ್ತಾಪವನ್ನು ಮುಂದಿಡುವ ಪ್ರತ್ಯಕ್ಷ ಅಥವಾ ಪರೋಕ್ಷ ಅಧಿಕಾರ ಕೇಂದ್ರ ಸರಕಾರಕ್ಕಿಲ್ಲ. ಮಾನವ ಸಂಪನ್ಮೂಲ ಸಚಿವಾಲಯಕ್ಕೂ ಇಲ್ಲ ಎಂದಿದ್ದಾರೆ.
ಸಿಬಲ್ ಈ ಹಿಂದೆ ನೀಡಿದ್ದ ಹೇಳಿಕೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಇದನ್ನು ನಿರಾಕರಿಸಿರುವ ಸಿಬಲ್, ತನ್ನ ಸಚಿವಾಲಯದಿಂದ ಅಂತಹ ಯಾವುದೇ ಪ್ರಸ್ತಾಪಗಳಿಲ್ಲ ಎಂದು ನಿತೀಶ್‌ಗೆ ಸ್ಪಷ್ಟನೆ ನೀಡಿದ್ದಾರೆ.