ವಿಶ್ವದ ಶ್ರೀಮಂತ ದೇವಸ್ಥಾನ ಎಂದೇ ಜನಪ್ರಿಯವಾಗಿರುವ ತಿರುಪತಿ ಶ್ರೀ ವೆಂಕಟೇಶ್ವರ ಸನ್ನಿಧಾನದಲ್ಲೇ ಅಲ್ಲಿನ ಸಿಬ್ಬಂದಿಗಳು ಮದ್ಯ-ಮಾಂಸ ಸೇವಿಸುವ ಮೂಲಕ ಅಪಚಾರ ಎಸಗಿದ್ದಾರೆ.
ಟಿಟಿಡಿ (ತಿರುಮಲ ತಿಮ್ಮಪ್ಪ ದೇವಸ್ಥಾನ) ಸಿಬ್ಬಂದಿಗಳು ಆಯುಧ ಪೂಜೆ ನೆಪದಲ್ಲಿ ತಿರುಮಲ ಬೆಟ್ಟದ ಮೇಲ್ಗಡೆ ಮದ್ಯ, ಮಾಂಸ ಸೇವಿಸುತ್ತಾ ಮೋಜು ಮಾಡುತ್ತಿದ್ದರು ಎಂದು ಟಿವಿ9 ವರದಿ ಮಾಡಿದೆ.
ಇದು ಆಯುಧ ಪೂಜೆ ಸ್ಪೆಷಲ್.. ಪವಿತ್ರ ತಿರುಮಲ ಬೆಟ್ಟದಲ್ಲಿ ವಿಶೇಷ ಪೂಜೆ ನೆಪದಲ್ಲಿ ಟಿಟಿಡಿ ಸಿಬ್ಬಂದಿ ಮದ್ಯ, ಮಾಂಸವನ್ನು ತರಿಸಿಕೊಂಡು ಕುಣಿದು ಕುಪ್ಪಳಿಸಿದ್ದರು ಎಂದು ಹೇಳಲಾಗಿದ್ದು, ಘಟನೆ ಬಗ್ಗೆ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿ ಬೆಟ್ಟದ ಮೇಲ್ಗಡೆ ಮೋಜಿನಲ್ಲಿ ತೊಡಗಿದ್ದನ್ನು ಕಂಡಿದ್ದ ಭಕ್ತರು ಟಿವಿ9ಗೆ ಮಾಹಿತಿ ನೀಡಿದ್ದರು. ಬಳಿಕ ವಾಹಿನಿ ಕ್ಯಾಮರಾಗಳೊಂದಿಗೆ ಸ್ಥಳಕ್ಕೆ ಧಾವಿಸಿದಾಗ ಅವರು ಪರಾರಿಯಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಿರುಮಲ ಬೆಟ್ಟಕ್ಕೆ ಪ್ರವೇಶಿಸುವ ಮೊದಲು ಅಲ್ಲಿನ ರಕ್ಷಣಾ ಸಿಬ್ಬಂದಿ ಭಕ್ತರನ್ನು ಕೂಲಂಕಷ ಪರಿಶೀಲನೆ ಮಾಡಿದ ನಂತರವಷ್ಟೇ ಅವಕಾಶ ನೀಡುತ್ತಾರೆ. ತಿರುಮಲ ಬೆಟ್ಟದಲ್ಲಿ ಬೀಡಿ-ಸಿಗರೇಟು ಮಾರಾಟ ಮತ್ತು ಸೇವನೆಗೂ ನಿಷೇಧವಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಟ್ಟದ ಮೇಲೆ ಮದ್ಯ, ಮಾಂಸ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯವಾಯಿತು ಎಂಬುದು ನಿಗೂಢವಾಗಿದೆ.
ತನಿಖೆ ನಡೆಸುತ್ತೇವೆ... ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಟಿಟಿಡಿ ಆಡಳಿತ ಮಂಡಳಿ ನಿರಾಕರಿಸಿದ್ದು, ಪ್ರಕರಣದ ಕುರಿತು ತನಿಖೆ ನಡೆಸಿದ ನಂತರ ಹೇಳಿಕೆ ನೀಡುವುದಾಗಿ ತಿಳಿಸಿದೆ.
ಘಟನೆ ನಡೆದದ್ದು ಸಾಬೀತಾದರೆ, ಅದು ಖಂಡಿತಾ ಅಪಚಾರವೆನಿಸುತ್ತದೆ. ಅಂತಹ ಸಿಬ್ಬಂದಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಟಿಟಿಡಿ ಹೇಳಿದೆ.