ಅಹಮದಾಬಾದ್ ಸರಣಿ ಸ್ಫೋಟ ಆರೋಪಿಗಳೂ ಸೇರಿದಂತೆ ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ನಿಷೇಧಿತ ಸಿಮಿ ಸಂಘಟನೆಯ ಕಾರ್ಯಕರ್ತರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ನಿಷೇಧಿತ ಉಗ್ರಗಾಮಿ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ ಐವರನ್ನು ಮಂಗಳವಾರ ರಾತ್ರಿ ಇಂದೋರ್‌ನ ಖಜ್ರಾನಾ ಪ್ರದೇಶದಲ್ಲಿ ಬಂಧಿಸಲಾಯಿತು. ಅವರು ಕೆಲ ಸಮಯದಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ಮಹಾ ನಿರ್ದೇಶಕ ಸಂಜಯ್ ರಾಣಾ ತಿಳಿಸಿದ್ದಾರೆ.
ಬಂಧಿತ ಇಬ್ಬರಲ್ಲಿ ಮೊಹಮ್ಮದ್ ಶಫೀಕ್ ಮತ್ತು ಮೊಹಮ್ಮದ್ ಯೂನಸ್ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದವರು. ಇವರು ಉಜ್ಜಯಿನಿ ಜಿಲ್ಲೆಯವರಾಗಿದ್ದಾರೆ.
ಉಳಿದ ಮೂವರಾದ ಶೇಖ್ ಸಾಜಿದ್, ಅರ್ಷಾದ್ ಮತ್ತು ಫಿರೋಜ್ ಖಂಡ್ವಾ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಇವರು ಧಾರ್ಮಿಕ ಕೇಂದ್ರಗಳಲ್ಲಿ ಸ್ಫೋಟ ನಡೆಸುವ ಕುರಿತು ತಂತ್ರಗಾರಿಕೆಗಳನ್ನು ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಅವರಿಂದ ವಶಪಡಿಸಿಕೊಂಡಿರುವ ದಾಖಲೆಗಳ ಪ್ರಕಾರ ಬಂಧಿತರು ನಿಷೇಧಿತ ಸಂಘಟನೆ ಸಿಮಿಗೆ ಸೇರಿದವರೆಂದು ಖಚಿತವಾಗಿದೆ ಎಂದು ಭಯೋತ್ಪಾದನಾ ವಿರೋಧಿ ದಳದ ಮುಖ್ಯಸ್ಥ ಪವನ್ ಶ್ರೀವಾತ್ಸವ್ ತಿಳಿಸಿದ್ದಾರೆ.
ಆರೋಪಿಗಳಿಂದ ಇತರ ಹಲವು ಸ್ಫೋಟ ಪ್ರಕರಣಗಳ ಕುರಿತ ಸಾಕ್ಷ್ಯ ದೊರೆಯುವ ನಿರೀಕ್ಷೆಗಳಿದ್ದು, ಈ ನಿಟ್ಟಿನಲ್ಲಿ ವಿಚಾರಣೆ ಮುಂದುವರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.