ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಮೂರು ರಾಜ್ಯಗಳ ಅಂತಿಮ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ, ಅರುಣಾಚಲ ಪ್ರದೇಶದಲ್ಲಿ ಆಡಳಿತದ ಗದ್ದುಗೆಯನ್ನು ಮತ್ತೆ ತನ್ನ ಕೈವಶ ಮಾಡಿಕೊಂಡಿದೆ. ಆದರೆ ಹರಿಯಾಣದಲ್ಲಿ ಮಾತ್ರ 40ಸ್ಥಾನ ಪಡೆಯುವ ಮೂಲಕ ಬಹುಮತಕ್ಕೆ ಆರು ಸ್ಥಾನಗಳ ಕೊರತೆಯೊಂದಿಗೆ ಅತಂತ್ರ ಸ್ಥಿತಿ ಬಂದೊದಗಿದೆ.
90ಸದಸ್ಯ ಬಲವುಳ್ಳ ಹರಿಯಾಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯುವ ವಿಶ್ವಾಸ ಹೊಂದಿತ್ತು. ಅಂತಿಮ ಫಲಿತಾಂಶದ ಅಂಕಿ-ಅಂಶದ ಪ್ರಕಾರ ಸರ್ಕಾರ ರಚಿಸಲು 45 ಸ್ಥಾನಗಳು ಬೇಕಾಗಿದೆ. ಆದರೆ ಕಾಂಗ್ರೆಸ್ 40ಸ್ಥಾನ ಪಡೆದಿದ್ದು, ಪೂರ್ಣ ಬಹುಮತದಿಂದ ವಂಚಿತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ರಚನೆಗಾಗಿ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಗಳತ್ತ ಚಿತ್ತ ನೆಟ್ಟಿದೆ.
ಪ್ರಮುಖ ವಿರೋಧ ಪಕ್ಷವಾಗಿರುವ ಇಂಡಿಯನ್ ನ್ಯಾಷನಲ್ ಲೋಕ ದಳ(ಐಎನ್‌ಎಲ್‌ಡಿ) ಈ ಬಾರಿ 32ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಚ್ಚರಿ ಮೂಡಿಸಿದೆ. ಕಳೆದ 2005ರಲ್ಲಿ ನಡೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಒಂಬತ್ತು ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದೆ. ಉಳಿದಂತೆ ಬಿಜೆಪಿ 04, ಎಚ್‌ಜೆಸಿಬಿಎಲ್-06, ಪಕ್ಷೇತರರು-08 ಮಂದಿ ಗೆಲುವು ಸಾಧಿಸಿದ್ದಾರೆ.
ಮಹಾರಾಷ್ಟ್ರ: ವಾಣಿಜ್ಯ ನಗರಿ ಮುಂಬೈ ಮಹಾನಗರಿಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಕೂಟ ತೃತೀಯ ಬಾರಿಗೂ ಜಯಭೇರಿ ಗಳಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. 288 ಸದಸ್ಯ ಬಲವುಳ್ಳ ಅಸೆಂಬ್ಲಿಯಲ್ಲಿ ಕಾಂಗ್ರೆಸ್-ಎನ್‌ಸಿಪಿ 144 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದೆ ಹಿಡಿಯುತ್ತೇವೆ ಎಂದು ಪಣ ತೊಟ್ಟಿದ್ದ ಶಿವಸೇನೆ-ಬಿಜೆಪಿ ಮೈತ್ರಿ ಕೂಟ ಮಾತ್ರ ತೀವ್ರ ಮುಖಭಂಗ ಅನುಭವಿಸಿದೆ. 90 ಸ್ಥಾನಗಳಲ್ಲಿ ಜಯಗಳಿಸುವಲ್ಲಿ ತೃಪ್ತಿಪಟ್ಟುಕೊಂಡಿದೆ. ಇನ್ನುಳಿದಂತೆ ತೃತೀಯ ರಂಗ-14, ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ 13ಸ್ಥಾನ, ಪಕ್ಷೇತರರು-27ಮಂದಿ ಜಯಭೇರಿ ಬಾರಿಸಿದ್ದಾರೆ.
ಕಣದಲ್ಲಿದ್ದ ಮುಖ್ಯಮಂತ್ರಿ ಅಶೋಕ್ ಚವಾಣ್, ನಾರಾಯಣ ರಾಣೆ, ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಪ್ರಣೀತಿ ಶಿಂಧೆ, ಮಾಜಿ ಗೃಹ ಸಚಿವ ಕೃಪಾಶಂಕರ್ ಸಿಂಗ್, ವಿಲಾಸ್ ರಾವ್ ದೇಶಮುಖ್ ಪುತ್ರ ಅಮಿತ್ ದೇಶಮುಖ್, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ಅಮರಾವತಿ ಕ್ಷೇತ್ರದ ರಾವ್ ಸಾಹೇಬ್ ಶೇಖಾವತ್ ವಿಜಯ ಸಾಧಿಸಿದ್ದಾರೆ.
ಅರುಣಾಚಲಪ್ರದೇಶ: ಅರುಣಾಚಲ ಪ್ರದೇಶದಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮತ್ತೆ ತನ್ನ ಪ್ರಾಬಲ್ಯ ಮೆರೆದಿದ್ದು, 60ಸದಸ್ಯ ಬಲವುಳ್ಳ ಅಸೆಂಬ್ಲಿಯಲ್ಲಿ 42ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ ಪೂರ್ಣ ಬಹುಮತ ಸಾಧಿಸಿದೆ. ಬಿಜೆಪಿ ಕೇವಲ 3 ಸ್ಥಾನಗಳನ್ನಷ್ಟೇ ಪಡೆದಿದೆ. ಎನ್‌ಸಿಪಿ-06, ತೃಣಮೂಲ ಕಾಂಗ್ರೆಸ್-05, ಪಕ್ಷೇತರರು-04ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಡೋರ್ಜಿ ಖಾಂಡೂ ಮತ್ತು ಮತ್ತಿಬ್ಬರು ಕಾಂಗ್ರೆಸ್ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.