ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಯಲ್ಲಿ ಪ್ರಜಾಪ್ರಭುತ್ವವಿಲ್ಲ, ಮಹಿಳೆಗೆ ಜಾಗವಿಲ್ಲ: ರಾಜೆ (BJP | Rajasthan | Vasundhara Raje | LK Advani)
Feedback Print Bookmark and Share
 
ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಅಂತ್ಯಗೊಂಡಿದ್ದು, ಮಹಿಳಾ ನಾಯಕಿಯರನ್ನು ತುಳಿಯಲಾಗುತ್ತಿದೆ ಎಂದು ರಾಜಸ್ಥಾನ ಪ್ರತಿಪಕ್ಷ ನಾಯಕಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವ ಬಿಜೆಪಿ ನಾಯಕಿ ವಸುಂಧರಾ ರಾಜೆ ಟೀಕಿಸಿದ್ದಾರೆ.

ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗಮನಾರ್ಹ ನಿರ್ವಹಣೆ ನೀಡದ ಕಾರಣ ವಿಪಕ್ಷ ನಾಯಕಿ ಸ್ಥಾನದಿಂದ ಕೆಳಕ್ಕಿಳಿಯುವಂತೆ ಕಳೆದ ಮೂರು ತಿಂಗಳುಗಳಿಂದ ಬಿಜೆಪಿ ಹೈಕಮಾಂಡ್ ರಾಜೆ ಮೇಲೆ ಒತ್ತಡ ಹೇರುತ್ತಿತ್ತು.

ರಾಜಿನಾಮೆ ಸಲ್ಲಿಸಿದ ನಂತರ ಪಕ್ಷದ ಬಗ್ಗೆ ಜುಗುಪ್ಸೆ ಹೊಂದಿದವರಂತೆ ಮಾತಿಗಿಳಿದ ಮಾಜಿ ಕಾಂಗ್ರೆಸ್ ಮುಖಂಡ ದಿವಂಗತ ಮಾಧವ ರಾವ್ ಸಿಂಧಿಯಾ ಸಹೋದರಿ ರಾಜೆ, ತನ್ನ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿದರು. ತನ್ನನ್ನು ಪಕ್ಷವು ನಡೆಸಿಕೊಂಡ ರೀತಿಯಿಂದ ತೀವ್ರವಾಗಿ ನೊಂದಿರುವುದಾಗಿಯೂ ಅವರು ಪಕ್ಷದ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿಯವರನ್ನು ಭೇಟಿ ಮಾಡಿದ ನಂತರ ತಿಳಿಸಿದರು.

ಮುಖ್ಯಮಂತ್ರಿಯಾಗಿದ್ದಾಗ ತನ್ನ ವಿರುದ್ಧ ಪಿತೂರಿಯಲ್ಲಿ ತೊಡಗಿದ್ದ ಹಿರಿಯ ಬಿಜೆಪಿ ಮುಖಂಡರತ್ತಲೂ ಕಿಡಿ ಕಾರಿದ ಅವರು, ನನ್ನನ್ನು ಈ ರೀತಿಯಾಗಿ ನಡೆಸಿಕೊಳ್ಳುವ ಮೂಲಕ ಬಿಜೆಪಿಯು ಮಹಿಳೆಯರಿಗೆ ಯಾವ ಗೌರವ ನೀಡುತ್ತಿದೆ ಎಂಬುದು ಬಹಿರಂಗವಾಗಿದೆ ಎಂದರು.

ವಿಜಯ ರಾಜೆ ಸಿಂಧಿಯಾರಿಂದ ತಾನು ಶಿಸ್ತನ್ನು ಅನುವಂಶೀಯವಾಗಿ ಪಡೆದಿದ್ದೇನೆ ಎನ್ನುವ ಮೂಲಕ ಅಶಿಸ್ತಿನ ವರ್ತನೆ ತೋರಿಸಿದ್ದೇನೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ತನ್ನ ರಾಜಿನಾಮೆಯನ್ನು ಪಡೆದುಕೊಂಡ ರೀತಿಯಿಂದ ತೇಜೋವಧೆ ಮಾಡಿದ ಅನುಭವ ತನಗಾಗಿದೆ ಎಂದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿನ ಸೋಲಿಗಾಗಿ 1952ರಿಂದಲೂ ಬಿಜೆಪಿಯಲ್ಲಿ ಯಾರೊಬ್ಬರನ್ನೂ ಬೆಟ್ಟು ಮಾಡಲಾಗಿರಲಿಲ್ಲ ಎಂದೂ ಆಕೆ ಮುಖಂಡರ ಗಮನ ಸೆಳೆದರು.

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿರುವ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಹುದ್ದೆಗೆ ರಾಜಿನಾಮೆ ನೀಡಬೇಕೆಂದು ಆಗಸ್ಟ್‌ನಲ್ಲಿ ಪಕ್ಷವು ಸೂಚಿಸಿತ್ತು.

ಇದೀಗ ರಾಜಸ್ಥಾನ ಪ್ರತಿ ಪಕ್ಷ ನಾಯಕಿ ಹುದ್ದೆಯಿಂದ ಕೆಳಗಿಳಿದಿರುವ ರಾಜೆಯವರಿಗೆ ಪಕ್ಷದ ಹೈಕಮಾಂಡ್‌ನಲ್ಲೂ ಯಾವುದೇ ಜವಾಬ್ದಾರಿ ನೀಡುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ