ಗೋವಾದಲ್ಲಿ ನಡೆಸಲಾಗಿರುವ ಸ್ಫೋಟಕ್ಕೆ ಕಾರಣ ಎಂಬುದಾಗಿ ಸಂಶಯಿಸಲಾಗಿರುವ ಸನಾತನ ಸಂಸ್ಥಾ ಹಾಗೂ ಪೊಲೀಸರು, ಉನ್ನತಾಧಿಕಾರಿಗಳು, ಕೆಲವು ಶಾಸಕರ ನಡುವೆ ಹೊಂದಾಣಿಕೆ ಇದೆ ಎಂಬುದಾಗಿ ಗೋವಾದ ಕಾನೂನು ಆಯೋಗದ ಅಧ್ಯಕ್ಷ ರಮಾಕಾಂತ್ ಖಾಲಪ್ ಹೇಳಿದ್ದಾರೆ.
"ಸನಾತನ ಸಂಸ್ಥಾವು ಪೊಲೀಸ್ ಇಲಾಖೆ, ಶಾಸಕಾಂಗ ಹಾಗೂ ನ್ಯಾಯಾಂಗದಲ್ಲಿ ತೂರಿಕೊಂಡಿದೆ. ಸ್ಫೋಟದ ಹಿಂದಿನ ರೂವಾರಿಗಳನ್ನು ರಕ್ಷಿಸಿಕೊಳ್ಳಲು ಸ್ಫರ್ಧೆ ಆರಂಭಗೊಂಡಿದೆ" ಎಂದು ಖಾಲಪ್ ಹೇಳಿದ್ದಾರೆ. ಈ ಹಿಂದೆ ಗೋವಾದ ಗೃಹಸಚಿವ ರವಿ ನಾಯ್ಕ್ ಅವರು ನೀಡಿರುವ ಹೇಳಿಕೆಯನ್ನೇ ಕಾನೂನು ಆಯೋಗದ ಅಧ್ಯಕ್ಷರ ಹೇಳಿಕೆ ಧ್ವನಿಸುತ್ತದೆ.
ರಾಜ್ಯ ಸಾರಿಗೆ ಸಚಿವ ರಾಮಕೃಷ್ಣ ಧವಲಿಕಾರ್ ಅವರ ಪತ್ನಿ ಹಾಗೂ ವಿವಾದಾಸ್ಪದ ಸಂಘಟನೆ ನಡುವೆ ಇರುವ ಸಂಪರ್ಕದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ರವಿ ನಾಯ್ಕ್ ಹೇಳಿದ್ದರು. ಸಚಿವ ರಾಮಕೃಷ್ಣ ಅವರ ಪತ್ನಿಯು ಸಂಸ್ಥಾನದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಕಾನೂನು ಆಯೋಗದ ಅಧ್ಯಕ್ಷರು ಹೇಳಿದ್ದಾರೆ.
ಅಕ್ಟೋಬರ್ 17 ರಂದು ಮರ್ಗೋವಾದಲ್ಲಿ ನಡೆಸಲಾಗಿರುವ ಸ್ಫೋಟವು ಗೋವಾದಲ್ಲಿನ ಭಯೋತ್ಪಾದನೆಯ ಮುಖವನ್ನು ಹೊರಗೆಡಹಿದೆ.
ಬಾಂಬನ್ನು ಉದ್ದೇಶಿತ ಜಾಗದಲ್ಲಿ ಇರಿಸುವ ಮುನ್ನವೇ ಅದು ಸ್ಫೋಟಗೊಂಡ ಕಾರಣ ಅಮಾಯಕರನ್ನು ಕೊಲ್ಲಲುದ್ದೇಶಿಸಿದ್ದ ಇಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ದೀಪಾವಳಿಯ ನರಕಚತುರ್ದಶಿಯಂದೇ ಈ ಸ್ಫೋಟನಡೆಸಲು ದುಷ್ಕರ್ಮಿಗಳು ಉದ್ದೇಶಿಸಿದ್ದರು.