ತಾನು ವಿಮಾನ ನಿಲ್ದಾಣಕ್ಕೆ ತೆರಳುವುದು ತಡವಾಗುವ ಕಾರಣ ವಿಮಾನ ಹಾರಾಟವನ್ನು ವಿಳಂಬಗೊಳಿಸಲು ಸಾಫ್ಟ್‌ವೇರ್ ಇಂಜೀನಿಯರ್ ಒಬ್ಬ ವಿಮಾನದಲ್ಲಿ ಬಾಂಬ್ ಇದೆ ಎಂಬ ಹುಸಿ ಬೆದರಿಕೆ ಹಾಕಿ, ಬಳಿಕ ಬೆಂಗಳೂರಿಗೆ ತೆರಳುವ ಬದಲಿಗೆ 'ಮಾವನ ಮನೆಗೆ' ತೆರಳಿರುವ ಘಟನೆ ಭಾನುವಾರ ಸಂಭವಿಸಿದೆ.
ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅಭಿಷೇಕ್ ಗುಪ್ತಾ ಬಂಧಿತ ಆರೋಪಿ. ಲಕ್ನೋದಿಂದ ರೈಲಿನಲ್ಲಿ ಆಗಮಿಸುತ್ತಿದ್ದ ಆತ ವಿಮಾನ ನಿಲ್ದಾಣ ತಲುಪುವುದು ತಡವಾಯಿತು. ಮುಂಬೈನ ಗೋ ಏರ್ ಕಮರ್ಷಿಯಲ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ಈ ವಿಮಾನ ತಪ್ಪಿದಲ್ಲಿ ಮುಂದಿನ ವಿಮಾನದಲ್ಲಿ ತೆರಳಲು ಅವಅವಕಾಶ ನೀಡಬೇಕೆಂದು ಕೋರಿದ. ಆದರೆ ಈತನ ಕೋರಿಕೆ ತಿರಸ್ಕೃತವಾಯಿತು ಇದಾದ ನಂತರ ಮತ್ತೊಮ್ಮೆ ಕರೆ ಮಾಡಿ ವಿಮಾನದಲ್ಲಿ ಹುಸಿ ಬಾಂಬ್ ಅಡಗಿಸಿಡಲಾಗಿದ ಎಂದು ಹೇಳಿದ್ದ.
ಬೆದರಿಕೆ ಕರೆ ಬರುತ್ತಿದ್ದಂತೆ ನಾಗರಿಕ ವಿಮಾನಯಾನ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿ ಪ್ರಯಾಣಿಕರು ಮತ್ತು ಅವರ ಸರಕುಗಳನ್ನು ಕೆಳಗಿಳಿಸಲಾಯಿತು. ವಿಮಾನವನ್ನು ಕೂಲಂಕಷ ತನಿಖೆಗೊಳಪಡಿಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ದೊರೆಯಲಿಲ್ಲ. ಕರೆ ಮಾಡಿದ ವ್ಯಕ್ತಿಯ ಧ್ವನಿ ನಮೂನೆಯನ್ನು ದಾಖಲಿಸಿಕೊಂಡ ಅಧಿಕಾರಿಗಳಿಗೆ ಇದು ತಡವಾಗಿ ಬರುವ ಪ್ರಯಾಣಿಕರೊಬ್ಬರ ಕೃತ್ಯ ಎಂಬುದು ಅರಿವಾಯಿತು ಎಂದು ಗೋ ಏರ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ನಿಗದಿಯಂತೆ ಬೆಳಿಗ್ಗೆ 8.45 ಹೊತ್ತಿಗೆ 158 ಮಂದಿ ಪ್ರಯಾಣಿಕರು ಹಾಗೂ ಆರು ಸಿಬ್ಬಂದಿಯನ್ನು ಒಳಗೊಂಡ ವಿಮಾನ ಬೆಂಗಳೂರಿಗೆ ತೆರಳಬೇಕಿತ್ತು. ಹುಸಿಬಾಂಬ್ ಬೆದರಿಕೆಯಿಂದಾಗಿ ವಿಮಾನವನ್ನು ಕೂಲಂಷ ತನಿಖೆಗೊಳಪಡಿಸಿದ್ದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಎರಡು ಗಂಟೆ ತಡವಾಗಿತ್ತು. ಬಳಿಕ ವಿಮಾನ ನಿಲ್ದಾಣಕ್ಕೆ ಅಭಿಷೇಕ್ ಗುಪ್ತಾ ಆಗಮಿಸಿದಾಗ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.