ಬಿಜೆಪಿಗೆ ಗಂಭೀರವಾದ ರಿಪೇರಿಯ ಅವಶ್ಯಕತೆ ಇದೆ ಎಂದು ಹೇಳಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಸರ್ಜರಿ ಆಗಬಹುದೇ ಇಲ್ಲ ಕಿಮೋಥೆರಪಿ ಆಗಬಹುದೇ ಎಂಬ ಆಯ್ಕೆ ಪಕ್ಷಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಇದರಿಂದಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ನಡುವಿನ ಉದ್ವಿಗ್ನತೆ ಮತ್ತಷ್ಟು ಆಳವಾದಂತಾಗಿದೆ.
ಇದಕ್ಕೆ ಅಷ್ಟೇ ಖಾರವಾದ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು "ಯಾರಿಗೆ ಹುಚ್ಚು ಹಿಡಿದಿದೆ(ಇಂತಹ ಸಲಹೆ ನೀಡಲು)" ಎಂದು ಪ್ರತಿಕ್ರಿಯಿಸಿದ್ದಾರೆ.
ಹರ್ಯಾಣ, ಮಹಾರಾಷ್ಟ್ರ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಸೋಲನ್ನಪ್ಪಿರುವ ಬಳಿಕ ಈ ನಾಯಕರ ನಡುವಿನ ವಾಗ್ಯುದ್ಧ ನಡೆದಿದೆ.
ಕಳೆದ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿಯೊಳಗಿನ ಆಂತರಿಕ ಕಲಹ ಹೆಚ್ಚಿದೆ. ರಾಜ್‌ನಾಥ್ ಸಿಂಗ್ ಅವರು ಅಧ್ಯಕ್ಷ ಸ್ಥಾನ ತ್ಯಜಿಸಬೇಕು ಎಂಬ ಒತ್ತಡ ಹೆಚ್ಚುತ್ತಿದ್ದರೂ, ಇದಕ್ಕೆ ಸಿಂಗ್ ಸೊಪ್ಪು ಹಾಕದ ಕಾರಣ ಸಮಸ್ಯೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.