ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ತಡೆದ ನಕ್ಸಲರು ರೈಲಿನ ಚಾಲಕನನ್ನು ಅಪಹರಿಸಿದ್ದು, ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಪ್ರಕರಣ ಅಂತ್ಯಗೊಂಡಿದ್ದು, ಮಂಗಳವಾರ ಸಾಯಂಕಾಲದವೇಳೆ ಅಪಹರಿಸಿದ್ದ ಚಾಲಕ ಹಾಗೂ ಒತ್ತೆಯಾಳಾಗಿರಿಸಿಕೊಂಡಿದ್ದ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ.
ಸಿಆರ್‌ಪಿಎಫ್ ಪಡೆ ಸ್ಥಳಕ್ಕೆ ತಲುಪಿದೆ ಎಂದು ಹೇಳಿರುವ ಸರ್ಕಾರ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದೆ. ರೈಲು, ಚಾಲಕ ಹಾಗೂ ಪ್ರಯಾಣಿಕರು ಕ್ಷೇಮವಾಗಿದ್ದಾರೆ ಎಂಬುದಾಗಿ ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಮಂಗಳವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ರೈಲನ್ನು ಅಡ್ಡಗಟ್ಟಿದ್ದ ನಕ್ಸಲರು ಗಂಟೆಗಳ ಬಳಿಕ ಚಾಲಕನನ್ನು ಒತ್ತೆಯಾಳಾಗಿರಿಸಿಕೊಂಡಿದ್ದು ಇದೀಗ ಬಿಡುಗಡೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಜಾರ್ಗ್ರಾಮ್ ಸಮೀಪದಲ್ಲಿರುವ ಬಂಟ್ಸಾಲಾ ರೈಲ್ವೇ ನಿಲ್ದಾಣದಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ಜನತಾ ಸಮಿತಿಯು ರೈಲನ್ನು ಮಂಗಳವಾರ ತಡೆದ ಬಳಿಕ ನಕ್ಸಲರು ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿಕೊಂಡು ಚಾಲಕನನ್ನು ಅಪಹರಿಸಿದ್ದರು.
ಸುಮಾರು 300 ನಕ್ಸಲರು ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ತಡೆದು, ಅದರ ಚಾಲಕನನ್ನು ಎಳೆದು ಹಾಕಿದರು ಎಂಬುದಾಗಿ ಪೊಲೀಸಧಿಕಾರಿ ದಿಲಿಪ್ ಮಿತ್ರಾ ತಿಳಿಸಿದ್ದಾರೆ.
ಈ ಮಧ್ಯೆ, ರೈಲು ತಡೆಗೆ ತಮಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಮಾವೋವಾದಿ ಬಂಡುಕೋರರು ಹೇಳಿದ್ದಾರಾದರೂ, ಪೊಲೀಸ್ ದೌರ್ಜನ್ಯದ ವಿರುದ್ಧ ಜನತಾ ಸಮಿತಿಯ ನಾಯಕ ಛತ್ರದಾರ್ ಮಹತೋ ಸೇರಿದಂತೆ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.