ನಾಗರಿಕ ಸೇವಾ ಪರೀಕ್ಷೆಗಳಿಗೆ ಹಾಜರಾಗಲು ಇತರೇ ಹಿಂದುಳಿದ ಜಾತಿಗಳ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗವು ಏಳು ಅವಕಾಶ ನೀಡುತ್ತಿದ್ದರೆ, ಸಾಮಾನ್ಯ ಅಭ್ಯರ್ಥಿಗಳಿಗೆ ಯಾಕೆ ಬರಿಯ ನಾಲ್ಕೇ ಅವಕಾಶ ನೀಡಲಾಗುತ್ತಿದೆ ಎಂಬುದಾಗಿ ಸುಪ್ರೀಂಕೋರ್ಟ್ ಕೇಂದ್ರ ಲೋಕಸೇವಾ ಆಯೋಗವನ್ನು ಪ್ರಶ್ನಿಸಿದೆ.
ಈ ಕ್ರಮವು ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬುದಾಗಿ ಅರ್ಜಿದಾರ ಆದಿತ್ಯ ಕುಮಾರ್ ಪರ ವಕೀಲ ಎಂ.ಎಲ್. ಲಹೋಟಿ ಅವರು ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಹಾಗೂ ಸಿರಿಯಾಕ್ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠದ ವಿರುದ್ಧ ವಾದಿಸಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಹೆಚ್ಚಿನ ಅವಕಾಶ ನೀಡಿರುವ ವಿಚಾರದ ಸಂವಿಧಾನಾತ್ಮಕತೆಯ ಕುರಿತು ಪರೀಕ್ಷಿಸಲು ನ್ಯಾಯಪೀಠ ನಿರಾಕರಿಸಿತಾದರೂ, ಒಬಿಸಿ ಅಭ್ಯರ್ಥಿಗಳನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭ್ಯರ್ಥಿಗಳಿಗೆ ಸಮನಾಗಿ ಪರಿಗಣಿಸಲಾಗುತ್ತಿದೆಯೇ ಎಂಬುದಾಗಿ ಆಯೋಗಕ್ಕೆ ನೋಟೀಸು ನೀಡಿದೆ.