ಮಹಾರಾಷ್ಟ್ರದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದವರ ಪೈಕಿ 140 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹರಿಯಾಣ ಹಾಗೂ ಅರುಣಾಚಲ ಪ್ರದೇಶಕ್ಕಿಂತ ಮಹಾರಾಷ್ಟ್ರದಲ್ಲಿ ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚು.
ರಾಷ್ಟ್ರೀಯ ಚುನಾವಣೆ ವೀಕ್ಷಕ(ಎನ್‌ಜಿಒ)ರ ಪ್ರಕಾರ, ಒಟ್ಟು 140 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ಶಿವಸೇನೆಯಿಂದ ಅತಿ ಹೆಚ್ಚು(31)ಶಾಸಕರು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ 26 ಶಾಸಕರು ಹಾಗೂ ಎನ್‌ಸಿಪಿಯ 24ಶಾಸಕರ ವಿರುದ್ಧ ಪ್ರಕರಣಗಳಿವೆ.
ಇತರ ಪ್ರಾದೇಶಿಕ ಪಕ್ಷಗಳಿಂದ ಮತ್ತು ಪಕ್ಷೇತರರಾಗಿ ಗೆಲುವು ಸಾಧಿಸಿರುವ 36ಶಾಸಕರ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳಿವೆ ಎಂದು ಎನ್‌ಜಿಒ ಅಂಕಿ ಅಂಶ ಬಹಿರಂಗಪಡಿಸಿದೆ.
ಏತನ್ಮಧ್ಯೆ 90ಸದಸ್ಯರನ್ನು ಹೊಂದಿರುವ ಹರಿಯಾಣದಲ್ಲಿ ರಾಷ್ಟ್ರೀಯ ಲೋಕದಳದ ಆರು ಶಾಸಕರು ಮತ್ತು ಕಾಂಗ್ರೆಸ್‌ನ ಐದು ಶಾಸಕರು ಸೇರಿದಂತೆ ಒಟ್ಟು 15ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.