ಮುಸ್ಲಿಮೇತರ ಯುವತಿಯರನ್ನು ಪ್ರೀತಿಸಿ ಬಳಿಕ ಅವರನ್ನು ಮದುವೆಯ ಬಂಧನದಲ್ಲಿ ಸಿಲುಕಿಸಿ ಇಸ್ಲಾಮ್‌ಗೆ ಮತಾಂತರ ಮಾಡುವ 'ಲವ್ ಜಿಹಾದ್' ಚಳುವಳಿ ಅಸ್ತಿತ್ವದಲ್ಲಿರುವ ಕುರಿತು ಯಾವುದೇ ನಿರ್ಣಾಯಕ ಪುರಾವೆಗಳು ಲಭಿಸಿಲ್ಲ ಎಂಬದಾಗಿ ಕೇರಳ ಪೊಲೀಸ್ ಬುಧವಾರ ಹೈಕೋರ್ಟಿಗೆ ತಿಳಿಸಿದೆ.
ರಾಜ್ಯದಲ್ಲಿ ಲವ್ ಜಿಹಾದ್ ಎಂಬ ಕುರಿತು ತನಗೆ ಯಾವುದೇ ನಿರ್ದಿಷ್ಟ ಅಥವಾ ನಿರ್ಣಾಯಕ ಅನ್ನವಂತರ ಪುರಾವೆಗಳು ಲಭಿಸಿಲ್ಲ ಎಂದು ಕೇರಳ ಡಿಜಿಪಿ ಜೇಕಬ್ ಪುನ್ನೋಸ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿವಿಧ ಜಿಲ್ಲೆಯ ಎಸ್ಪಿಗಳು ಹಾಗೂ ಆಧೀನ ಅಧಿಕಾರಿಗಳು ರಾಜ್ಯದಲ್ಲಿ ಲವ್ ಜಿಹಾದ್ ಕುರಿತ ಸಂಘಟಿತ ಕಾರ್ಯದ ಕುರಿತು ಸಲ್ಲಿಸಲಾಗಿರುವ ವರದಿಯ ಆಧಾರದಲ್ಲಿ ಈ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ವರದಿ ಸಲ್ಲಿಸುವಂತೆ ನ್ಯಾಯಾಲಯವು ಅಕ್ಟೋಬರ್ 26ರಂದು ಡಿಜಿಪಿ ಅವರಿಗೆ ನಿರ್ದೇಶನ ನೀಡಿತ್ತು. ಇದರನ್ವಯ ಸಲ್ಲಿಸಿರುವ ವರದಿಯಲ್ಲಿ ಎಸ್ಪಿಗಳು ಸಲ್ಲಿಸಿರುವ 18 ವರದಿಗಳನ್ನು ಮುದ್ರಿತ ಲಕೊಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಡಿಜಿಪಿ ಅವರ ಈ ಹಿಂದಿನ ಹೇಳಿಕೆಯಿಂದ ಅಸಂತುಷ್ಟಗೊಂಡಿದ್ದ ನ್ಯಾಯಾಲಯ, ಅವರ ಹೇಳಿಕೆಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತ್ತು. ಅವರು ನೀಡಿರುವ ಹೇಳಿಕೆಗೆ ಆಧಾರವಾಗಿ ಬಳಸಿದ ವರದಿಗಳನ್ನು ನ್ಯಾಯಾಲಯಕ್ಕೆ ಮುದ್ರಿತ ಲಕೊಟೆಯಲ್ಲಿ ಸಲ್ಲಿಸುವಂತೆ ತಾಕೀತು ಮಾಡಲಾಗಿತ್ತು.