ಮುಂಬೈ ಭಯೋತ್ಪಾದನೆ ದಾಳಿಗಳ ಪ್ರಥಮ ವಾರ್ಷಿಕದ ಆಸುಪಾಸಿನಲ್ಲಿ ಮತ್ತೆ ಭಯೋತ್ಪಾದನೆ ದಾಳಿ ನಡೆಸಿ ಅಟ್ಟಹಾಸ ಮೆರೆಯಲು ಭಯೋತ್ಪಾದಕರು ಸಜ್ಜಾಗುತ್ತಿದ್ದು, ಕನಿಷ್ಠ 5 ಭಾರತೀಯ ನಗರಗಳಿಗೆ ಸನ್ನಿಹಿತವಾದ ಭಯೋತ್ಪಾದನೆ ದಾಳಿಗಳ ಬಗ್ಗೆ ಭಾರತೀಯ ಸರ್ಕಾರ ಎಚ್ಚರಿಕೆ ನೀಡಿದೆ.
ಭಯೋತ್ಪಾದಕರು ಭಾರತೀಯ ಪಶ್ಚಿಮ ತೀರದಲ್ಲಿ ನುಸುಳಿ ದೇಶದ ಮುಖ್ಯ ನೆಲೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆಂದು ರಾಜ್ಯ ಸರ್ಕಾರಗಳಿಂದ ಗುಪ್ತಚರ ದಳ ಮಾಹಿತಿಗಳನ್ನು ಸ್ವೀಕರಿಸಿರುವುದಾಗಿ ಗೃಹಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
26/11 ದಾಳಿಯ ವಾರ್ಷಿಕದ ಹಿನ್ನೆಲೆಯಲ್ಲಿ ವಿಮಾನನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮುಂತಾದ ಮುಖ್ಯ ಸ್ಥಳಗಳ ಸುತ್ತಮುತ್ತ ಭದ್ರತೆ ಹೆಚ್ಚಿಸುವಂತೆ ರಾಜ್ಯಸರ್ಕಾರಗಳಿಗೆ ಆದೇಶಿಸಲಾಗಿದೆಯೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಮೆರಿಕದ ಭಯೋತ್ಪಾದಕ ಡೇವಿಡ್ ಹೆಡ್ಲೆಯನ್ನು ಎಫ್‌ಬಿಐ ನಡೆಸಿದ ತನಿಖೆಯ ಆಧಾರದ ಮೇಲೆ ಮತ್ತು ಭಾರತೀಯ ಬೇಹುಗಾರಿಕೆ ಸಂಸ್ಥೆಗಳ ಮಾಹಿತಿ ಬೆಂಬಲದೊಂದಿಗೆ ಗೃಹಸಚಿವಾಲಯ ಕಟ್ಟೆಚ್ಚರ ನೀಡಿದೆ.
ಹೆಡ್ಲಿ ಫಿಲಾಡೆಲ್ಫಿಯಕ್ಕೆ ಹಾರಲು ಸಿದ್ಧತೆ ನಡೆಸುತ್ತಿದ್ದಂತೆ ಚಿಕಾಗೊ ಒಹರೆ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಎಫ್‌ಬಿಐ ಹೆಡ್ಲಿಯ ಸಹಚರ ಪಾಕಿಸ್ತಾನದ ಮೂಲದ ಕೆನಡಾ ಪೌರ ಹುಸೇನ್ ರಾನಾನನ್ನು ಕೂಡ ಬಂಧಿಸಿತ್ತು. ಹೆಡ್ಲಿ ಭೇಟಿ ಮಾಡಿದ ದೆಹಲಿ, ಮುಂಬೈ, ಲಕ್ನೊ, ಆಗ್ರಾ ಮತ್ತು ಅಹ್ಮದಾಬಾದ್‌ಗಳಿಗೆ ಕಟ್ಟೆಚ್ಚರ ವಹಿಸುವಂತೆ ಸಲಹೆಗಳನ್ನು ನೀಡಲಾಗಿದೆ.