ಗೋವಾದ ಮಡ್ಗಾಂವ್‌ನಲ್ಲಿ ದೀಪಾವಳಿ ಹಬ್ಬಾಚರಣೆ ಸಂದರ್ಭದಲ್ಲಿ ನಡೆಸಲಾಗಿರುವ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರತ್ನಗಿರಿಯ ಖೇಡ್ ಎಂಬಲ್ಲಿಂದ 20ರ ಹರೆಯದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.
"ಪ್ರಕರಣದ ಕುರಿತು ಸೂಕ್ತ ತನಿಖೆಯ ಬಳಿಕ ಸ್ಫೋಟ ಸಂಚಿಗಾಗಿ ಧನಂಜಯ್ ಅಸ್ತೇಕರ್ ಎಂಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂಬುದಾಗಿ" ಎಸ್ಪಿ ದಿಲಿಪ್ ದೇಶಪಾಂಡೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಸ್ತೇಕರ್ ಇಚಾಲ್‌ಕರಂಜೀ ಎಂಬಲ್ಲಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಇಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಧನಂಜಯ್ ಸನಾತನ ಸಂಸ್ಥಾದ ಸದಸ್ಯನಾಗಿದ್ದ ಎಂದು ದೇಶಪಾಂಡೆ ತಿಳಿಸಿದ್ದಾರೆ. ಬಂಧಿತ ವಿದ್ಯಾರ್ಥಿಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಿರುವ ಬಳಿಕ ಆತನನ್ನು 12 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
ಸಂಕೋಲೆ ಎಂಬ ಗ್ರಾಮದಲ್ಲಿ ಬಾಂಬ್ ಇರಿಸುವ ಸಂಚಿನಲ್ಲಿ ಅಸ್ತೇಕರ್ ಭಾಗಿಯಾಗಿದ್ದ. ಬಾಂಬನ್ನು ಪತ್ತೆಹಚ್ಚಿ ಅದನ್ನು ನಿಷ್ಕ್ರೀಯಗೊಳಿಸಲಾಗಿತ್ತು.
ಅಕ್ಟೋಬರ್ 16ರಂದು ಮಡ್ಗಾಂವ್‌ನಲ್ಲಿ ಬಾಂಬ್ ಸ್ಫೋಟಗೊಂಡು ಸನಾತನ ಸಂಸ್ಥಾದ ಸದಸ್ಯರಾದ ಮಲ್ಗೊಂಡ ಪಾಟೀಲ್ ಮತ್ತು ಯೋಗೇಶ್ ನಾಯ್ಕ್ ಎಂಬಿಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಸಂಘಟನೆಯ ವಿನಾಯಕ್ ಪಾಟೀಲ್ ಮತ್ತು ವಿನಯ್ ತಲೇಕರ್ ಎಂಬಿಬ್ಬರನ್ನು ಬಳಿಕ ವಿಶೇಷ ತನಿಖಾ ತಂಡ ಬಂಧಿಸಿತ್ತು.
ಮೃತರಿಬ್ಬರು ದೀಪಾವಳಿ ಆಚರಣೆಯ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸ್ಕೂಟರ್‌ನಲ್ಲಿ ಬಾಂಬ್ ಸಾಗಿಸುತ್ತಿದ್ದ ವೇಳೆ ಅದು ಸ್ಫೋಟಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಮೂರನೆ ಬಂಧನವಾಗಿದ್ದು, ಬಂಧಿತ ವ್ಯಕ್ತಿಗಳೆಲ್ಲ ಸನಾತನ ಸಂಸ್ಥಾದ ಸಂಪರ್ಕ ಹೊಂದಿದ್ದಾರೆ.