ಬಿಹಾರ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆಯು ಬಿಹಾರದ ಗಯಾ ಜಿಲ್ಲೆಯ ಎರಡು ಸ್ಥಳಗಳಿಂದ ಗುರುವಾರ ನಸುಕಿಗೂ ಮುಂಚಿನ ಅವಧಿಯಲ್ಲಿ ಸುಮಾರು 45 ಕ್ವಿಂಟಾಲ್ ಸ್ಫೋಟಕವನ್ನು ಪತ್ತೆಮಾಡಿದೆ.
ಖಚಿತ ಮಾಹಿತಿಯಾಧಾರದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೌಲಕ್ಷಿನಿ ಪ್ರದೇಶದ ಅಂಗಡಿಯೊಂದಕ್ಕೆ ದಾಳಿ ನಡೆಸಿದ್ದು, ಸ್ಫೋಟಕಗಳನ್ನು ತುಂಬಿದ್ದ 29 ಗೋಣಿಚೀಲಗಳನ್ನು ಪತ್ತೆ ಮಾಡಿದ್ದಾರೆ ಎಂಬುದಾಗಿ ಎಸ್ಪಿ ಎಸ್.ಎಂ. ಕೊಪಾಡೆ ಅವರು ತಿಳಿಸಿದ್ದಾರೆ.
ವಿಶೇಷ ಕಾರ್ಯಪಡೆಯು ಜಿಲ್ಲೆಯ ದೇಲಾ ಪೊಲೀಸ್ ಠಾಣೆಯ ಮೇಲೂ ದಾಳಿನಡೆಸಿದ್ದು, 70 ಚೀಲ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾಗಿರುವ ಸ್ಫೋಟಕಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತದ್ದಾಗಿದೆ. ಪಾಟ್ನಾದಿಂದ ಫಾರೆನ್ಸಿಕ್ ತಜ್ಞರನ್ನು ಕರೆಸಿಕೊಳ್ಳಲಾಗಿದೆ ಮತ್ತು ಪ್ರತೀ ಮೂಟೆಯಲ್ಲೂ 40ರಿಂದ 45 ಕೆಜಿ ಸ್ಫೋಟಕಗಳಿದ್ದವು ಎಂದು ಅವರು ತಿಳಿಸಿದರು.
ನವೆಂಬರ್ 10ರಂದೂ ಸಹ ಬಿಹಾರ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಪಾಯಿಂಟ್ 315 ಬೋರ್‌ನ 30 ಸಾವಿರ ತೋಟಾಗಳು, ಎರಡು ಎಕೆ-47 ರೈಫಲ್‌ಗಳು, ನಾಲ್ಕು ಇನ್ಸಾಸ್ ರೈಫಲ್‌ಗಳು ಹಾಗೂ ದೊಡ್ಡ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದವು.