ಅಕ್ರಮ ಆಸ್ತಿ ಹಾಗೂ ಭೂಗತ ಪಾತಕಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್‌ಗೆ ಪೊಲೀಸ್ ಮಹಾ ನಿರ್ದೇಶಕ ಎಸ್.ಎಸ್.ವಿರ್ಕ್ ಕ್ಲೀನ್ ಚಿಟ್ ನೀಡಿದ್ದಾರೆ.
ಆ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಅವಧಿಯ ನಂತರ ಮತ್ತೆ ದಯಾ ನಾಯಕ್ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಯಾ ನಾಯಕ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಹಾಗೂ ಭೂಗತ ಪಾತಕಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಭ್ರಷ್ಟಾಚಾರ ನಿಗ್ರಹ ದಳದ ಆರೋಪದ ಮೇರೆಗೆ 2005ರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಡಿಜಿಪಿ ಎಸ್.ಎಸ್.ವಿರ್ಕ್, ಎಲ್ಲಾ ಆರೋಪಗಳಿಂದ ದಯಾನಾಯಕ್ ಅವರನ್ನು ಮುಕ್ತಗೊಳಿಸಿದ್ದಾರೆ.
ಕರ್ನಾಟಕದ ಕಾರ್ಕಳ ಮೂಲದ ದಯಾ ನಾಯಕ್ ಅವರು ಮುಂಬೈನಲ್ಲಿ 1995ರಲ್ಲಿ ಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಭೂಗತ ಪಾತಕಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ನಾಯಕ್ ಅವರ ಎನ್‌ಕೌಂಟರ್‌ಗೆ 80ಕ್ಕೂ ಅಧಿಕ ಪಾತಕಿಗಳು ಬಲಿಯಾಗಿದ್ದರು. ಇಲಾಖೆಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ದಯಾ ನಾಯಕ್ ತಮ್ಮ ಹುಟ್ಟೂರಾದ ಕಾರ್ಕಳ ಎಣ್ಣೆಹೊಳೆಯಲ್ಲಿ ಕೋಟಿ ರೂ.ವೆಚ್ಚದಲ್ಲಿ ಶಾಲೆಯೊಂದನ್ನು ಕಟ್ಟಿಸಿದ್ದರು. ತದನಂತರ ನಾಯಕ್ ವಿರುದ್ಧ ಭ್ರಷ್ಟಾಚಾರ ಮತ್ತು ಭೂಗತ ಪಾತಕಿಗಳೊಂದಿಗಿನ ನಂಟಿನ ಆರೋಪ ಪ್ರಬಲವಾಗಿ ಕೇಳಿಬಂದಿತ್ತು.
ಇದೀಗ ಎಲ್ಲಾ ಆರೋಪಗಳಿಂದ ದೋಷಮುಕ್ತಗೊಂಡಿರುವ ಎನ್‌ಕೌಂಟರ್ ಸ್ಪೆಶಲಿಸ್ಟ್ ದಯಾ ನಾಯಕ್ ಮತ್ತೆ ಕರ್ವವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.