ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2 ಮೊಮ್ಮಕ್ಕಳ ಅಜ್ಜಿಯನ್ನು ವಿವಾಹವಾದ 21ರ ತರುಣ (21 Year Old Marries Grandma Bride | Abhimanyu Kumar | Sunita Devi)
36 ವರ್ಷಗಳ ವಯಸ್ಸಿನ ಅಂತರವೂ ಅವರ ಪ್ರೇಮಕ್ಕೆ ತಡೆಗೋಡೆಯಾಗಲಿಲ್ಲ. 21ರ ಹರೆಯದ ಅಭಿಮನ್ಯು ಕುಮಾರ್ ಎಂಬಾತ ಈಗಾಗಲೇ ಮೊಮ್ಮಕ್ಕಳಿರುವ 57 ವರ್ಷದ ಸುನೀತಾ ದೇವಿಯನ್ನು ವಿವಾಹವಾಗಿದ್ದಾನೆ.
ಮೊರಾದಾಬಾದ್ ಜಿಲ್ಲೆಯ ಪ್ರೀತಂ ನಗರದಲ್ಲಿ ಬುಧವಾರ ಈ ವಿವಾಹ ನೆರವೇರಿದೆ. ಸ್ಥಳೀಯರ ಪ್ರಕಾರ, ಕುಮಾರ್ ಮತ್ತು ದೇವಿ ಇಬ್ಬರೂ ಕಳೆದೊಂದು ವರ್ಷದಿಂದ ಪ್ರೇಮಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಬಳಿಕ ದೇವಿಯ ಮಾವನ ಮನೆಯವರು ಆಕೆಯನ್ನು ಮನೆಯಿಂದ ಹೊರಗೆ ಹಾಕಿದರು. ಬಳಿಕ ಆಕೆ ಉದ್ಯೋಗ ಅರಸುತ್ತಾ ಪ್ರೀತಂನಗರಕ್ಕೆ ಬಂದಿದ್ದಳು.
ದೇವಿಗೆ 16 ಮತ್ತು 25 ವಯಸ್ಸಿನ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ದೊಡ್ಡವಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹೀಗಾಗಿ ಆಕೆ ಇಬ್ಬರು ಮೊಮ್ಮಕ್ಕಳ ಮುದ್ದಿನ ಅಜ್ಜಿ.
ಪ್ರೀತಂನಗರಕ್ಕೆ ಬಂದ ಆಕೆ ಕುಮಾರನ ಮನೆಯಲ್ಲಿಯೇ ಬಾಡಿಗೆ ಕೊಠಡಿ ಹಿಡಿದಳು. ನಿಧಾನವಾಗಿ ಅವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆಯಿತು. ಮೂರೇ ದಿನಗಳ ಹಿಂದೆ, ತಾನು ಆಕೆಯನ್ನು ಮದುವೆಯಾಗುತ್ತಿದ್ದೇನೆ, ದಯವಿಟ್ಟು ಮದುವೆಗೆ ಬನ್ನಿ ಎಂದು ಕುಮಾರ್ ತನ್ನ ನೆರೆಮನೆಯವರಿಗೆ ಆಹ್ವಾನ ನೀಡಿದ್ದಾನೆ. ಸುಮಾರು 60-70 ಮಂದಿ ಮದುವೆಗೆ ಹಾಜರಾಗಿದ್ದರು.
ದೇವಿಗೆ ಆಕೆಯ ಪುತ್ರಿಯರಿಂದ ಯಾವುದೇ ವಿರೋಧ ಎದುರಾಗಲಿಲ್ಲ. ಆದರೆ ಕುಮಾರನ ಹೆತ್ತವರು ಈ ಮದುವೆಗೆ ವಿರೋಧ ಒಡ್ಡಿದರು. ಕುಮಾರ ಪ್ರಾಪ್ತ ವಯಸ್ಕನಲ್ಲ ಎಂದು ಹೇಳಿ, ಆತನ ಹೆತ್ತವರು ಈ ಮದುವೆ ತಡೆಯುವುದಕ್ಕಾಗಿ ಸ್ಥಳೀಯ ಪೊಲೀಸರಿಗೆ ದೂರನ್ನೂ ನೀಡಿದ್ದರು. ಆದರೆ ಶಾಲಾ ಪ್ರಮಾಣಪತ್ರದ ವಯಸ್ಸಿನ ಆಧಾರದಲ್ಲಿ ಆತ ವಯಸ್ಕನಾಗಿದ್ದು, ನಾವೇನೂ ಮಾಡುವಂತಿಲ್ಲ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಇದೀಗ ಕುಮಾರನ ಹೆತ್ತವರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.