ಶಂಕಿತ ಉಗ್ರ, ಪಾಕಿಸ್ತಾನದಲ್ಲಿ ಜನಿಸಿದ ಅಮೆರಿಕ ಪ್ರಜೆ ಡೇವಿಡ್ ಹೆಡ್ಲೀ ವಿರುದ್ಧ ಭಾರತದ ತನಿಖಾ ಏಜೆನ್ಸಿ ಪ್ರಕರಣ ದಾಖಲಿಸಿದೆ ಎಂಬುದಾಗಿ ಗೃಹಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಎಫ್‌ಬಿಐ ಬಂಧನಕ್ಕೀಡಾಗಿರುವ ಈತ ಪ್ರಸಕ್ತ ಅಮೆರಿಕದಲ್ಲಿ ಇದ್ದಾನೆ. ಭಾರತದ ವಿರುದ್ಧ ಉಗ್ರಗಾಮಿ ದಾಳಿ ನಡೆಸಲು ಸಂಚು ರೂಪಿಸಿರುವ ಆರೋಪ ಹೊರಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹೆಡ್ಲಿ ಸಹಚರ ತಹವೂರ್ ಹುಸೇನ್ ರಾಣಾನ ವಿರುದ್ಧ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ಚಿದಂಬರಂ ಹೇಳಿದ್ದಾರೆ. ಅವರು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ಹೆಡ್ಲಿ ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದ್ದ. ಮುಂಬೈ ದಾಳಿಗೆ ಮುಂಚಿತವಾಗಿ ಮತ್ತು ಅದರ ಬಳಿಕವೂ ಸಹ ಆತ ಭೇಟಿ ನೀಡಿದ್ದ. ಆತ ಭೇಟಿ ನೀಡಿದ ನಗರಗಳಲ್ಲಿ ಆತ ಎಲ್ಲಿಗೆ ಹೋಗಿದ್ದ ಮತ್ತು ಯಾರನ್ನು ಭೇಟಿಯಾಗಿದ್ದ ಎಂಬ ಕುರಿತು ತನಿಖೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಹೆಡ್ಲಿ ಉತ್ತರ ಭಾರತದ ಎರಡು ಪ್ರಮುಖ ಶಾಲೆಗಳು ಹಾಗೂ ರಾಷ್ಟ್ರೀಯ ರಕ್ಷಣಾ ತರಬೇತಿ ಕಾಲೇಜನ್ನು ಸ್ಫೋಟಿಸಲು ಹೂಡಿರುವ ಸಂಚನ್ನು ತನಿಖೆ ವೇಳೆಗೆ ಬಹಿರಂಗ ಪಡಿಸಿದ್ದ.