ವಂದೇಮಾತರಂ ವಿರುದ್ಧ ದೇವ್‌ಬಂದ್ ಫತ್ವಾ ಹೊರಡಿಸಿರಬಹುದು. ಕಟ್ಟರ್ ಮುಸ್ಲಿಂವಾದಿಗಳು ಈ ಗೀತೆಯನ್ನು ಹಾಡುವುದು ಇಸ್ಲಾಂ ವಿರೋಧಿ ಎಂಬುದಾಗಿ ಹುಯಿಲೆಬ್ಬಿಸಿರಬಹುದು. ಆದರೆ ಉತ್ತರ ಪ್ರದೇಶದ ಪುಟ್ಟ ಗ್ರಾಮದಲ್ಲಿರುವ ಮದ್ರಸ ಒಂದರಲ್ಲಿನ ಮಕ್ಕಳ ಶೈಕ್ಷಣಿಕ ದಿನಚರಿ ಆರಂಭಗೊಳ್ಳುವುದೇ ವಂದೇ ಮಾತರಂ ಗೀತೆಯೊಂದಿಗೆ. ಇದು ಇಂದು ನಿನ್ನೆಯ ವಿಚಾರವಲ್ಲ, ಕಳೆದ 30 ವರ್ಷಗಳಿಂದ ಇಲ್ಲಿ ಇದೇ ಪದ್ಧತಿ.
ಲಕ್ನೋದಿಂದ 200 ಕಿಲೋಮೀಟರ್ ದೂರದಲ್ಲಿರುವ ಅಂಬೇಡ್ಕರ್ ಜಿಲ್ಲೆಯ ಸತಾಸಿಪುರ ಗ್ರಾಮದಲ್ಲಿನ ನಿಯಾಮತ್ತುಲೂಮ್ ಮದ್ರಸ ಕೋಮು ಸೌಹಾರ್ದತೆಗೆ ಒಂದು ಉತ್ತಮ ಉದಾಹರಣೆ. ಇಲ್ಲಿ ವಿದ್ಯಾರ್ಥಿಗಳಿಗೆ ಹಿಂದೂ ಹಾಗೂ ಮುಸ್ಲಿಂ ಧರ್ಮಸೂಕ್ತಿಗಳನ್ನು ಬೋಧಿಸಲಾಗುತ್ತದೆ.
1905ರ ಸೆಪ್ಟೆಂಬರ್ 7ರಂದು ರಾಷ್ಟ್ರೀಯ ಹಾಡು ಎಂಬುದಾಗಿ ಪರಿಗಣಿಸಲ್ಪಟ್ಟಿರುವ ವಂದೇಮಾತರಂ ಗೀತೆಯ ವಿರುದ್ಧದ ನಿರ್ಬಂಧ ಅಥವಾ ಫತ್ವಾವನ್ನು ಮದ್ರಸದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಕ್ಕೊರಲಿನಿಂದ ವಿರೋಧಿಸಿದ್ದಾರೆ.
"ವಂದೇಮಾತರಂ ಗೀತೆಯನ್ನು ಹಾಡುವುದು ಇಸ್ಲಾಮ್ ವಿರೋಧಿ ಎಂಬುದು ತರ್ಕವಿಲ್ಲದ್ದು. ಮುಸ್ಲಿಂ ಪಂಡಿತರು ಈ ಗೀತೆಯ ವಿರುದ್ಧ ಫತ್ವಾ ಹೊರಡಿಸಲು ಕಾರಣವಾದ ವಿಚಾರಗಳು ಯಾವುದು ತನಗೆ ಅದರಲ್ಲಿ ಕಂಡುಬಂದಿಲ್ಲ" ಎಂದು ಮದ್ರಸದ ಪ್ರಾಂಶುಪಾಲ ಮೌಲ್ವಿ ಮೆಹ್ರವ್ ಹಾಶಿಮ್ ಹೇಳಿದ್ದಾರೆ.
"ಧರ್ಮದ ಬದಲು ರಾಷ್ಟ್ರೀಯತೆಗೆ ಹೆಚ್ಚಿನ ಮಹತ್ವವಿದೆ. ಭಾರತೀಯ ನಾಗರಿಕನಾಗಿ ದೇಶಭಕ್ತಿಯನ್ನು ಹೊಮ್ಮಿಸುವ ಗೀತೆಗೆ ಯಾವುದೇ ವಿರೋಧವಿರಬಾರದು. ಇದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹತ್ವ ಪಡೆದಿದ್ದ ಗೀತೆ" ಎಂದು ಅವರು ಹೇಳಿದ್ದಾರೆ. 1976ರಲ್ಲಿ ಮದ್ರಸ ಆರಂಭಗೊಂಡಾಗಿನಿಂದ ಈ ಹಾಡನ್ನು ಪ್ರಾರ್ಥನಾ ಗೀತೆಯಾಗಿ ಅಳವಡಿಕೊಂಡಿರುವುದಾಗಿ ಸಂಸ್ಕೃತ ಶಿಕ್ಷಕ ಅಬ್ದುಲ್ ಕಲಾಂ ಹೇಳಿದ್ದಾರೆ.
ವಂದೇ ಮಾತರಂ ಮಾತ್ರವಲ್ಲದೆ ಮದ್ರಸದಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯನ್ನೂ ಕಲಿಸಲಾಗುತ್ತದೆ. ಮಧ್ಯಾಹ್ನದ ಊಟದ ಬಳಿಕ ವಿದ್ಯಾರ್ಥಿಗಳು ಗಾಯತ್ರಿ ಮಂತ್ರವನ್ನು ಪಠಿಸುತ್ತಾರೆ. ವಿದ್ಯಾರ್ಥಿಗಳು ಕುರಾನ್ ಮಾತ್ರವಲ್ಲದೆ, ರಾಮಾಯಣ ಹಾಗೂ ಭಗವದ್ಗೀತೆಯನ್ನೂ ಬೋಧಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಮದ್ರಸಕ್ಕೆ ಮುಸ್ಲಿಂ ಮಕ್ಕಳು ಮಾತ್ರವಲ್ಲದೆ, ಹಿಂದೂ ಮಕ್ಕಳು ಬರುತ್ತಿದ್ದಾರೆ ಎಂಬುದಾಗಿ ಮದ್ರಸದ ಶಿಕ್ಷಕರಾಗಿರುವ ನಫೀಸ್ ಅಹಮದ್ ಹೇಳಿದ್ದಾರೆ.