"ತೆಲಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಶವಗಳ ಮೇಲಿರುವ ಚಿಲ್ಲರೆ ಹಣವನ್ನು ತೆಗೆದುಕೊಳ್ಳುವಂತಹ ನೀಚ ಬುದ್ಧಿಯ ವ್ಯಕ್ತಿ" ಎಂಬುದಾಗಿ ಓಬಳಾಪುರಂ ಮೈನಿಂಗ್ ಕಂಪೆನಿಯ ಮುಖ್ಯಸ್ಥ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಹೈದರಾಬಾದಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.
ನಗರದ ಬಂಜಾರಾಹಿಲ್ಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೆಡ್ಡಿ, ಚಂದ್ರಬಾಬು ನಾಯ್ಡು ಹುಚ್ಚನಂತೆ ವರ್ತಿಸುತ್ತಿದ್ದಾರೆ, ನನಗೆ ಅವರ ಕಾಲಾವಧಿಯಲ್ಲಿಯೇ ಗಣಿಗಾರಿಕೆಗೆ ಅನುಮತಿ ದೊರೆತಿದೆ ಎಂಬುದನ್ನು ಅವರು ಮರೆತಂತಿದೆ ಎಂದು ವ್ಯಂಗವಾಡಿದರು.
"ನನ್ನ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿಯ ಒಂದೇ ಒಂದು ಅಕ್ರಮವನ್ನು ನಾಯ್ಡು ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಮತ್ತು ಒಂದೊಮ್ಮೆ ಇದಕ್ಕೆ ತಪ್ಪಿದಲ್ಲಿ ನಾಯ್ಡು ರಾಜಕೀಯ ನಿವೃತ್ತಿ ಹೊಂದಲಿ" ಎಂದು ಅವರು ಸವಾಲು ಹಾಕಿದರು.
ಚಂದ್ರಬಾಬುನಾಯ್ಡುರಂತಹ ನೀಚ ರಾಜಕಾರಣಿ ದೇಶದಲ್ಲಿ ಯಾರು ಇಲ್ಲ. ಆಂಧ್ರಪ್ರದೇಶದ ಜನರು ಅವರ ನೀಚ ಗುಣಗಳನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ ರೆಡ್ಡಿ, ರಾಜಕೀಯಕ್ಕೆ ಬಂದಾಗ ಕೇವಲ ಎರಡು ಎಕರೆ ಮಾತ್ರ ಕೃಷಿ ಭೂಮಿಯನ್ನು ಹೊಂದಿದ್ದ ನಾಯ್ಡು, ಇದೀಗ ಅಪಾರ ಆಸ್ತಿಯನ್ನು ಸಂಪಾದಿಸಿರುವುದು ಹೇಗೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
PTI
ಮುಂದಿನ ದಿನಗಳಲ್ಲಿ ನಾಯ್ಡು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ ರೆಡ್ಡಿ, "ನಾಯ್ಡು ಹವಾಲ ಹಗರಣದಲ್ಲಿ ಸಿಲುಕಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧುಕೋಡಾರಂತಹ ಲಕ್ಷ ಮಂದಿಗೆ ಸಮಾನವಾಗಿದ್ದಾರೆ. ನನ್ನ ಆಸ್ತಿಯ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ" ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
"ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರ್ ರೆಡ್ಡಿಗೂ ತಮಗೂ ಇರುವ ಸಂಬಂಧ, ತಂದೆ ಮಕ್ಕಳ ಸಂಬಂಧವಾಗಿದೆ. ನಮ್ಮದು 20 ವರ್ಷಗಳ ಸಂಬಂಧ. ಇಂತಹ ಆರೋಪಗಳ ಹಿಂದೆ ಮಾಫಿಯಾದ ಕೈವಾಡವಿರುವ ಸಾಧ್ಯತೆಗಳಿವೆ ಎಂದು ಶಂಕಿಸಿದ ಅವರು, ಓಬಳಾಪುರಂ ಗಣಿಗಾರಿಕೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ" ಎಂದು ಪುನರುಚ್ಚರಿಸಿದರಲ್ಲದೆ, ಯಾವುದೇ ರೀತಿಯ ತನಿಖೆಗೆ ತಾನು ಸಿದ್ಧ ಎಂದು ಹೇಳಿದರು.
ಟಿಡಿಪಿ ಆರೋಪಿಸಿರುವಂತೆ, ರಾಜಶೇಖರ ರೆಡ್ಡಿ ಅವರ ಪುತ್ರ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮಾಲಕತ್ವದ ಸಾಕ್ಷಿ ಪತ್ರಿಕೆ(ತೆಲುಗು ಪತ್ರಿಕೆ) ಹಾಗೂ ದೂರದರ್ಶನ ವಾಹಿನಿಯಲ್ಲಿ, ತಾನು ಅಥವಾ ತನ್ನ ಓಬಳಾಪುರಂ ಮೈನಿಂಗ್ ಕಂಪೆನಿಯು ಹಣ ತೊಡಗಿಸಿರುವುದು ನಿಜವೆಂದು ಸಾಬೀತಾದರೆ ತಾನು ಯಾವುದೇ ಶಿಕ್ಷೆ ಎದುರಿಸಲು ಸಿದ್ಧ ಎಂಬುದಾಗಿ ಹೇಳಿದರು.
ಇದಲ್ಲದೆ, ವೈಎಸ್ಆರ್ ಆಗಲಿ ಅಥವಾ ಅವರ ಪುತ್ರ ಆಗಲಿ ನಮ್ಮ ಯೂವುದೇ ವ್ಯವಹಾರದಲ್ಲಿ ಒಂದು ಪೈಸಾ ತೊಡಗಿಸಿಲ್ಲ. ಅಥವಾ ನಾನು ಅವರ ವ್ಯವಹಾರದಲ್ಲಿ ಯಾವುದೇ ಹಣ ಹೂಡಿಲ್ಲ ಎಂದು ರೆಡ್ಡಿ ನುಡಿದರು.
ದಿವಂಗತ ವೈಎಸ್ಆರ್ ಓಬಳಾಪುರಂ ಮೈನಿಂಗ್ ಕಂಪೆನಿಗೆ ಹಲವು ನೆರವು ಒದಗಿಸಿದ್ದಾರೆ ಎಂಬುದಾಗಿ ಚಂದ್ರಬಾಬು ನಾಯ್ಡು ಆರೋಪಿಸಿದ್ದರು.
ಸಂಸ್ಥೆಯ ಮೇಲಿರುವ ಆಪಾದನೆಗ ಕುರಿತು ಮೂರು ವರ್ಷಗಳ ಹಿಂದೆಯೇ ವಿವಿಧ ಸಮಿತಿಗಳಿಂದ ತನಿಖೆ ನಡೆದಿತ್ತು. ಇದೀಗ ವೈಎಸ್ಆರ್ ಸತ್ತಿದ್ದಾರೆ ಎಂಬ ಕಾರಣಕ್ಕಾಗಿ ನಾಯ್ಡು ಈ ವಿಚಾರ ಎತ್ತುತ್ತಿದ್ದಾರೆ ಎಂದು ಹೇಳಿರುವ ರೆಡ್ಡಿ, ಈ ಪ್ರಕರಣವು ನ್ಯಾಯಾಲಯದಲ್ಲಿ ಇರುವ ಕಾರಣ ಈ ವಿಚಾರವನ್ನು ಎತ್ತಿರುವ ನಾಯ್ಡು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ದೂರಿದರು.