ದೆಹಲಿಗೆ ತೆರಳುತ್ತಿದ್ದ ಮಾಂಡೊರ್ ಎಕ್ಸ್‌ಪ್ರೆಸ್ ರೈಲಿನ ಎಲ್ಲ 15 ಬೋಗಿಗಳು ಜೈಪುರಕ್ಕೆ 40 ಕಿಮೀ ದೂರದ ಬಾನ್ಸ್ ಕಾ ಫಾಟಕ್‌ನಲ್ಲಿ ರಾತ್ರಿ 1.30ಕ್ಕೆ ಹಳಿತಪ್ಪಿದ್ದರಿಂದ ಕನಿಷ್ಠ ಆರು ಜನರು ಅಸುನೀಗಿದ್ದು, 20 ಜನರಿಗೆ ಗಂಭೀರ ಗಾಯಗಳಾಗಿವೆ.
ಜೋಧ್‌ಪುರ್ ಮತ್ತು ದೆಹಲಿ ನಡುವೆ ಸಂಚರಿಸುವ ರೈಲಿನ ಐದು ಹವಾನಿಯಂತ್ರಿತ ಬೋಗಿಗಳು, ಏಳು ಸ್ಲೀಪರ್ ಕೋಚ್‌ಗಳು ಮತ್ತು ಮೂರು ಸಾಮಾನ್ಯ ಬೋಗಿಗಳು ಜೈಪುರ ಮತ್ತು ಜಾರ್ ಅಥವಾ ಜಟ್ವಾರಾ ರೈಲ್ವೆ ನಿಲ್ದಾಣಗಳ ನಡುವೆ ಹಳಿತಪ್ಪಿದೆಯೆಂದು ವಾಯವ್ಯ ರೈಲ್ವೆ ಸಿಆರ್‌ಪಿಒ ಎಂಕಿಯ ತಿಳಿಸಿದ್ದಾರೆ.
ಒಂದು ಹವಾನಿಯಂತ್ರಿತ ಬೋಗಿ ಸಂಪೂರ್ಣ ತಲೆಕೆಳಗಾಗಿದೆಯೆಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು. ಜಿಆರ್‌ಪಿ ಸಿಬ್ಬಂದಿ ಗಾಯಾಳುಗಳನ್ನು ನಜ್ಜುಗುಜ್ಜಾದ ಬೋಗಿಗಳಿಂದ ಪಾರು ಮಾಡಿ ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ.
ಏತನ್ಮಧ್ಯೆ, ಜಿಆರ್‌ಪಿ ಸಿಬ್ಬಂದಿ ಹೈಡ್ರಾಲಿಕ್ ಕಟರ್‌ಗಳನ್ನು ಬಳಸಿ, ತಲೆಕೆಳಗಾದ ಬೋಗಿಗಳನ್ನು ಕತ್ತರಿಸುತ್ತಿದ್ದಾರೆಂದು ಜೈಪುರದ ಜಿಆರ್‌ಪಿ ಮೇಲ್ವಿಚಾರಕ ಅಶ್ವಿನಿ ಅತ್ರೆ ತಿಳಿಸಿದ್ದಾರೆ.ಪರಿಹಾರ ರೈಲೊಂದು ನವದೆಹಲಿಯಿಂದ ಅಪಘಾತ ಸ್ಥಳಕ್ಕೆ ತೆರಳಿದ್ದು, ಜೈಪುರ, ದೆಹಲಿ ಮತ್ತು ಆಗ್ರಾಕ್ಕೆ ಪ್ರಯಾಣಿಕರನ್ನು ಒಯ್ಯಲು 25 ಬಸ್‌ಗಳನ್ನು ನಿಯೋಜಿಸಲಾಗಿದೆ.
ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಹಳಿಗಳ ಒಂದು ಭಾಗ ಎಸಿ ಬೋಗಿಯನ್ನು ಭೇದಿಸಿ ಪ್ರಯಾಣಿಕರಿಗೆ ಬಡಿದಿರಬೂಹುದು ಎಂದು ಶಂಕಿಸಲಾಗಿದೆ. ಸತ್ತವರಲ್ಲಿ ಮೂವರನ್ನು ನವದೆಹಲಿಯ ಸೊನಾಲ್ ಸಿಂಗ್(18), ಜೋಧ್‌ಪುರದ ಎಸ್. ಕುಮಾರ್ ಮತ್ತು ಜೈಪುರದ ಉಜ್ವಲ್ ವಾದ್ವಾ(27) ಎಂದು ಗುರುತಿಸಲಾಗಿದ್ದು, ಇನ್ನೂ 3 ದೇಹಗಳನ್ನು ಗುರುತಿಸಬೇಕಾಗಿದೆ.
ಗಾಯಗೊಂಡ 19 ಜನರಲ್ಲಿ ನ್ಯೂಜಿಲೆಂಡ್ ಪೌರ ಅನಾ ಎಲಿಜಬೆತ್ ಅವರನ್ನು ಎಸ್‌ಎಂಎಸ್ ಆಸ್ಪತ್ರೆಗೆ ಸೇರಿಸಲಾಗಿದೆ.ಮೃತರ ನಿಕಟ ಬಂಧುಗಳಿಗೆ 5 ಲಕ್ಷ ರೂ. ಪರಿಹಾರವನ್ನು ರೈಲ್ವೆ ಸಚಿವ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ರೈಲು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 10,000 ರೂ. ಪರಿಹಾರ ನೀಡಲಾಗುವುದು ಎಂದು ವಾಯವ್ಯ ರೈಲ್ವೆ ವಕ್ತಾರ ತಿಳಿಸಿದರು.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೃತರ ಸಮೀಪ ಬಂಧುಗಳಿಗೆ ಎರಡು ಲಕ್ಷ ರೂ. ಪರಿಹಾರ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾದವರಿಗೆ 50,000 ಪರಿಹಾರ ಘೋಷಿಸಿದರು. ನವದೆಹಲಿ-ಆಜ್ಮಿರ್ ಶತಾಬ್ದಿ ರೈಲು ಸೇರಿದಂತೆ 12 ರೈಲುಗಳ ಮಾರ್ಗ ಬದಲಿಸಲಾಗಿದೆ.