ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾಯ್ಡುವನ್ನು ರಾಜಕೀಯವಾಗಿ ಮುಗಿಸುವೆ: ಜನಾರ್ದನ ರೆಡ್ಡಿ
(Obalapuram Mining company | Gali Janardan Reddy | Chandrababu Naidu | Ore)
ಯಡಿಯೂರಪ್ಪ ಅವರನ್ನು ಮೇಲೆ-ಕೆಳಗೆ ಮಾಡಿದ ಬಳಿಕ ಇದೀಗ ಗಾಲಿ ಜನಾರ್ದನ ರೆಡ್ಡಿ ಎಂಬ ಗಣಿ ಧಣಿ- ರಾಜ್ಯದ ಪ್ರವಾಸೋದ್ಯಮ ಸಚಿವ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ತೊಡೆ ತಟ್ಟತೊಡಗಿದ್ದಾರೆ.
ಇದೇ ರೀತಿ ತನ್ನ ಮತ್ತು ತನ್ನ ಮಾಲೀಕತ್ವದ ಓಬಳಾಪುರಂ ಅದಿರು ಕಂಪನಿಗೆ ಆಂಧ್ರದ ದಿವಂಗತ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿಯ ಪುತ್ರ ಜಗನ್ ಮೋಹನ್ ರೆಡ್ಡಿ ಜೊತೆ 'ಅಪವಿತ್ರ' ಸಂಬಂಧ ಇದೆ ಎಂಬಂತಹಾ ಇಲ್ಲಸಲ್ಲದ ಹೇಳಿಕೆಗಳನ್ನು, ಆರೋಪಗಳನ್ನು ಮಾಡುತ್ತಿರುವುದನ್ನು ಮುಂದುವರಿಸಿದರೆ, ನಾಯ್ಡು ಅವರನ್ನು ರಾಜಕೀಯವಾಗಿ ಮುಗಿಸುವುದಾಗಿ ರೆಡ್ಡಿ ನಯವಾಗಿಯೇ 'ಗುಡುಗಿ'ದ್ದಾರೆ.
"ನೀವು ಬದುಕಿರುವವರೆಗೂ ಇನ್ನೆಂದಿಗೂ ಆಂಧ್ರ ಮುಖ್ಯಮಂತ್ರಿ ಪೀಠದಲ್ಲಿ ಕೂರುವುದು ಸಾಧ್ಯವಿಲ್ಲ" ಎಂದು ಜನಾರ್ದನ ರೆಡ್ಡಿ ಅವರು ಹೈದರಾಬಾದಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶಾಪ ಹಾಕಿದ್ದಾರೆ.
ತಾನೊಬ್ಬ ರೆಡ್ಡಿ ಆಗಿರುವುದರಿಂದ ಮತ್ತು ವೈಎಸ್ಆರ್ ಕುಟುಂಬಕ್ಕೆ ಆಪ್ತನಾಗಿರುವುದರಿಂದ ತೆಲುಗುದೇಶಂ ಮುಖ್ಯಸ್ಥ ನಾಯ್ಡು ತನ್ನ ಮೇಲೆ ತಿರುಗಿ ಬೀಳುತ್ತಿದ್ದಾರೆ ಎಂದು ಹೇಳಿದ ಜನಾರ್ದನ ರೆಡ್ಡಿ, ವೈಎಸ್ಆರ್ ಕುಟುಂಬದ ಜತೆಗೆ ಭಾವನಾತ್ಮಕ ಸಂಬಂಧ ಇದೆಯೇ ಹೊರತು, ವ್ಯಾವಹಾರಿಕ ಸಂಬಂಧ ಇಲ್ಲವೇ ಇಲ್ಲ ಎಂದರು.
ವೈಎಸ್ಆರ್ ಕುಟುಂಬದ ಸಾಕ್ಷಿ ಟಿವಿ, ಪತ್ರಿಕೆಯಲ್ಲಿ ನಾನೇನೂ ಹಣ ಹೂಡಿಲ್ಲ ಎಂದವರು ಸ್ಪಷ್ಟಪಡಿಸಿದರು.
ನಾಯ್ಡು ಆರೋಪ ಮಾಡಿದ್ದಿಷ್ಟೆ: ಓಬಳಾಪುರಂ ಮೈನಿಂಗ್ ಕಂಪನಿಯ ಶೇ.50 ಲಾಭಾಂಶ ಪಡೆಯುತ್ತಿರುವ ರೆಡ್ ಗೋಲ್ಡ್ ಎಂಬುದು ವೈಎಸ್ಆರ್ ಕುಟುಂಬದ ಆಪ್ತರಿಂದ ನಡೆಯುತ್ತಿರುವ ಕಂಪನಿ. ಅಂದರೆ ಪ್ರತಿ ವರ್ಷ 400-500 ಕೋಟಿ ರೂಪಾಯಿ ಲಾಭಾಂಶದ ಪಾಲುದಾರಿಕೆ ಇದೆ. ರೆಡ್ ಗೋಲ್ಡ್‌ಗಿರುವ ಏಕೈಕ ಕೆಲಸ ಎಂದರೆ ರಾಜ್ಯ ಮತ್ತು ಕೇಂದ್ರ ಸರಕಾರದ ಮಧ್ಯೆ ಸೇತುವೆಯಾಗಿ, ಅನುಮತಿ ಪಡೆಯುವುದು ಮತ್ತು ಸಮೀಕ್ಷೆ ನಡೆಸುವುದು. ಇದಕ್ಕಾಗಿ ಅವರಿಗೆ ಶೇ.50 ಲಾಭಾಂಶ. ಇದರ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟ ಎಂದು ದೂರಿದ್ದಾರೆ ನಾಯ್ಡು.
ಹಾಗಿದ್ದರೆ, ಗಣಿ ರೆಡ್ಡಿ ಸಹೋದರರ ವ್ಯಾವಹಾರಿಕ ಹಿತಾಸಕ್ತಿಗೂ, ವೈಎಸ್ಆರ್ ಪುತ್ರ ಜಗನ್‌ನ ಮುಖ್ಯಮಂತ್ರಿ ಪಟ್ಟ ಆಕಾಂಕ್ಷೆಗೂ ನೇರ ಸಂಬಂಧ ಇದೆಯೇ? ಇದ್ದಿರಲೂಬಹುದು. ಅತ್ತ ಜಾರ್ಖಂಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಈ ಗಣಿಗಾರಿಕೆಯಿಂದಲೇ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದ ಪ್ರಕರಣ ಬಯಲಾಗತೊಡಗಿರುವಂತೆಯೇ, ಗಣಿ ಧಣಿಗಳ ಮೇಲೂ ಒತ್ತಡ ಹೆಚ್ಚಿರುವುದು ಸುಳ್ಳಲ್ಲ.
ಬೆಜೆಪಿಯ ಮುಖಂಡನಾಗಿರುವ ಹೊರತಾಗಿಯೂ, ವೈಎಸ್ಆರ್ ನನ್ನ ತಂದೆಯ ಸಮಾನ ಮತ್ತು ಅವರ ಪುತ್ರ ಜಗನ್ ಕಿರಿಯ ಸಹೋದರನಿದ್ದಂತೆ ಎಂದು ಜನಾರ್ದನ ರೆಡ್ಡಿ ಹೇಳಿರುವುದು ಕುತೂಹಲ ಮೂಡಿಸಿದ್ದರೆ, ಅತ್ತಕಡೆಯಿಂದ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ರೋಸಯ್ಯ (ಜಗನ್ ಬಣದ ವಿರುದ್ಧ ಬಣ) ಓಬಳಾಪುರಂ ಗಣಿ ವಿರುದ್ಧ ಅರಣ್ಯ ಇಲಾಖೆ, ಗಣಿ ಇಲಾಖೆ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳ ತಂಡಗಳನ್ನು ನಿಯೋಜಿಸಿ, ತನಿಖೆ ನಡೆಸುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.