ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಹೆಸರು ಕೇಳಿಬರುತ್ತಿರುವ ನಡುವೆ, ಊಹಾಪೋಹ ಹಾಗೇ ಮುಂದುವರಿದಿದ್ದು, ಹಿರಿಯ ನಾಯಕರು ಅದನ್ನು ದೃಢಪಡಿಸುತ್ತಲೂ ಇಲ್ಲ ಮತ್ತು ನಿರಾಕರಿಸುತ್ತಲೂ ಇಲ್ಲ. 'ತಾವು ಸದ್ಯಕ್ಕೆ ಏನನ್ನೂ ಹೇಳಲು ಬಯಸುವುದಿಲ್ಲ. ಗಡ್ಕರಿ ಹೆಸರನ್ನು ಆಯ್ಕೆ ಮಾಡಿರುವ ಬಗ್ಗೆ ತಾವು ಖಚಿತಪಡಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ' ಎಂದು ಹೆಸರು ಬಹಿರಂಗ ಮಾಡಲು ಬಯಸದ ಬಿಜೆಪಿ ವಕ್ತಾರ ತಿಳಿಸಿದ್ದು, ಮಾಧ್ಯಮದ ಗುಸುಗುಸು ಇನ್ನಷ್ಟು ಹೆಚ್ಚಿದೆ.
ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರಾಗಿ ನೇಮಿಸಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೆಂಬಲಿಸಿದ್ದು, ಅಧ್ಯಕ್ಷರ ಸ್ಥಾನಕ್ಕೆ ಹೆಸರು ಕೇಳಿಬರುತ್ತಿರುವ ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರಿಗಿಂತ ಗಡ್ಕರಿ ಮೇಲುಗೈ ಪಡೆದಿದ್ದಾರೆ.
ದೆಹಲಿಯಲ್ಲಿದ್ದ ಗಡ್ಕರಿ ಅವರನ್ನು ಈ ಕುರಿತು ಪ್ರಶ್ನಿಸಿದಾಗ, ತಮಗೆ ಯಾವುದೇ ಹೊಣೆಗಾರಿಕೆ ನೀಡಿದರೂ ಅದನ್ನು ನಿರ್ವಹಿಸುವುದಾಗಿ ಹೇಳಿದ್ದು, ತಾವು ಅಧ್ಯಕ್ಷ ಹುದ್ದೆಯ ಸ್ಪರ್ಧಾಕಾಂಕ್ಷಿಯಲ್ಲವೆಂದು ನುಡಿದರು.
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಚೆನ್ನಾಗಿ ಕಾರ್ಯನಿರ್ವಹಿಸದಿದ್ದರೂ, ಪಕ್ಷದ ಉನ್ನತ ಹುದ್ದೆ ಅವಕಾಶಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಅವರು ಅಭಿವೃದ್ಧಿಆಧಾರಿತ ನಾಯಕರಾಗಿದ್ದು, ನಿಷ್ಕಳಂಕ ವ್ಯಕ್ತಿತ್ವವನ್ನು ಹೊಂದಿದ್ದಾರೆಂದು ಪಕ್ಷದ ಮುಖ್ಯಕಚೇರಿಯಲ್ಲಿ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.