ಕರಣ್ ಜೋಹರ್ ಅವರ ಮತ್ತೊಂದು ಚಿತ್ರವು ಇದೀಗ ಮರಾಠಿ 'ಮನು'ಗಳ ಕೆಂಗಣ್ಣಿಗೆ ತುತ್ತಾಗಿದೆ. ಈ ಬಾರಿ ತಗಾದೆ ತೆಗೆದಿರುವುದು ಶಿವ ಸೇನೆ. ಕುರ್ಬಾನ್ ಚಿತ್ರದಲ್ಲಿ 'ಸೈಜ್ ಜೀರೋ' ಮಾದಕ ನಟಿ ಕರೀನಾ ಕಪೂರ್ ಅವರ ಬೆತ್ತಲೆ ಬೆನ್ನಿನ ಪೋಸ್ಟರುಗಳು ಶಿವಸೈನಿಕರ ಕಣ್ಣು ಕೆಂಪಗಾಗಿಸಿವೆ.
ಅಂಧೇರಿ ಪ್ರದೇಶದ ಜುಹು, ಮರೋಲ್ ಮತ್ತಿತರ ಪ್ರದೇಶಗಳಲ್ಲಿ ಶುಕ್ರವಾರ ಶಿವಸೈನಿಕರು ಬೀದಿ ಬೀದಿಗಳಲ್ಲಿ ಸಂಚರಿಸಿ ಚಿತ್ರದ ಪೋಸ್ಟರುಗಳನ್ನು ಹರಿದುಹಾಕಿದರು.
ಒಂದು ತಿಂಗಳ ಹಿಂದಷ್ಟೇ, ಮರಾಠಿ ಮನುಗಳ ಮತ್ತೊಂದು ಸಂರಕ್ಷಕ ಪಕ್ಷ ಎಂಎನ್ಎಸ್ (ಮರಾಠಿ ನವನಿರ್ಮಾಣ ಸೇನಾ) ಕೂಡ, ಕರಣ್ ಜೋಹರ್ ಅವರ 'ವೇಕ್ ಅಪ್ ಸಿದ್' ಚಿತ್ರದಲ್ಲಿ ಮುಂಬೈಯ ಹಳೆಯ ಹೆಸರು 'ಬಾಂಬೇ' ಬಳಸಿದ್ದಕ್ಕಾಗಿ ಗಲಾಟೆ ಎಬ್ಬಿಸಿತ್ತು. ಕೊನೆಗೆ ಈ ಭಾಷಾ 'ಅಭಿಮಾನಿ'ಗಳಲ್ಲಿ ಕರಣ್ ಕ್ಷಮೆಯನ್ನೂ ಕೇಳಬೇಕಾಗಿಬಂದಿತ್ತು.
ನಟಿಯನ್ನು ಅರೆನಗ್ನ ಸ್ಥಿತಿಯಲ್ಲಿ ತೋರಿಸುತ್ತಿದ್ದ ಪೋಸ್ಟರುಗಳಿಗೆ ನಮ್ಮ ಆಕ್ಷೇಪವಿದೆ. ಇದು ಕೆಟ್ಟ ಅಭಿರುಚಿಯದ್ದು. ಇದು ನಮ್ಮ ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂದು ಶಿವಸೇನಾ ಕಾರ್ಯಕರ್ತ ಸುಭಾಷ್ ಕಾಂತಾ ಸಾವಂತ್ ಹೇಳಿದ್ದಾರೆ.
ಕೆಲವು ಪೋಸ್ಟರುಗಳಲ್ಲಿ ಕರೀನಾ ಚಿತ್ರದ ಮೇಲೆ ಶಿವಸೈನಿಕರು ಸೀರೆಯನ್ನು ಬರೆದು 'ಮಾನ ರಕ್ಷಣೆ' ಮಾಡಿದ್ದರು!
ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಮತ್ತು ಪ್ರಭಾವ ವೃದ್ಧಿಸಿಕೊಳ್ಳಲು ಸುಲಭದ ಗುರಿಗಳನ್ನು ಹೆಕ್ಕಿಕೊಳ್ಳುತ್ತಿವೆ. ಸಾಕಷ್ಟು ಗಿಮಿಕ್ ಮಾಡಿದ್ದ ಎಂಎನ್ಎಸ್ ಇತ್ತೀಚೆಗಿನ ಚುನಾವಣೆಗಳಲ್ಲಿ ಉತ್ತಮ ಎನಿಸಬಹುದಾದ ಸಾಧನೆ ಮಾಡಿರುವುದು ಶಿವಸೇನೆಗೂ ಆ ಹಾದಿಯಲ್ಲಿ ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.